ಬೆಂಗಳೂರು: ಜನಿವಾರ ಹಾಕಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಬೀದರ್‌ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಲು ನಿರಾಕರಿಸಿದ್ದು ಹಾಗೂ ಶಿವಮೊಗ್ಗದಲ್ಲಿ ಜನಿವಾರ ತೆಗೆಸಿ, ಪರೀಕ್ಷೆಗೆ ಅವಕಾಶ ನೀಡಿದ ಎರಡೂ ಪ್ರತ್ಯೇಕ ಪ್ರಕರಣಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ.
ವಸ್ತ್ರ ಸಂಹಿತೆಯಲ್ಲಿ ಎಲ್ಲಿಯೂ ಜನಿವಾರ ತೆಗೆಸಬೇಕೆಂದು ಹೇಳಿರಲಿಲ್ಲ. ಆದರೂ ಎರಡು ಕೇಂದ್ರಗಳಲ್ಲಿ ಈ ರೀತಿಯ ಅಧಿಕ ಪ್ರಸಂಗ ಮಾಡಿರುವುದು ಖಂಡನೀಯ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.
ಜನಿವಾರದ ಕಾರಣಕ್ಕೆ ಬೀದರ್‌ನ ವಿದ್ಯಾರ್ಥಿ ಗಣಿತ ಪರೀಕ್ಷೆ ಬರೆದಿಲ್ಲ. ಹೀಗಾಗಿ ಆ ವಿದ್ಯಾರ್ಥಿ ನಿಯಮ ಪ್ರಕಾರ ಎಂಜಿನಿಯರಿಂಗ್ ರಾಂಕ್ ಪಡೆಯಲು ಅರ್ಹನಾಗುವುದಿಲ್ಲ. ಅವನದಲ್ಲದ ತಪ್ಪಿಗೆ ಅವನಿಗೆ ಶಿಕ್ಷೆ ವಿಧಿಸುವುದು ಸರಿಯಲ್ಲ. ಹೀಗಾಗಿ ವಿದ್ಯಾರ್ಥಿಗೆ ಅನ್ಯಾಯವಾಗದ ಹಾಗೆ ಏನೆಲ್ಲ ಮಾಡಬಹುದು ಎಂಬುದನ್ನು ಉನ್ನತ ಶಿಕ್ಷಣ ಸಚಿವರ ಜತೆ ಚರ್ಚಿಸಿ, ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಸಿಇಟಿ ನಡೆಸುವ ಸಂಪೂರ್ಣ ಜವಾಬ್ದಾರಿ ಆಯಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳದ್ದಾಗಿದೆ. ಯಾವ ರೀತಿ ಮಾಡಬೇಕು, ಯಾವುದಕ್ಕೆಲ್ಲ ನಿಷೇಧ ಇತ್ಯಾದಿ ವಿಷಯಗಳ ಬಗ್ಗೆ ಮೊದಲೇ ತರಬೇತಿ ಕೂಡ ನೀಡಲಾಗಿತ್ತು. ಲಿಖಿತವಾಗಿಯೂ ತಿಳಿಸಲಾಗಿತ್ತು. ಆದರೂ ಈ ರೀತಿ ಮಾಡಿರುವುದು ನೋವಿನ ಸಂಗತಿಯಾಗಿದೆ. ಯಾವುದೇ ಧರ್ಮ/ಜಾತಿಯವರಿಗೆ ಘಾಸಿಯಾಗುವ ಯಾವ ತೀರ್ಮಾನವನ್ನೂ ಕೆಇಎ ಕೈಗೊಂಡಿಲ್ಲ. ನಮ್ಮದೇನಿದ್ದರೂ ವಿದ್ಯಾರ್ಥಿ ಕೇಂದ್ರಿತ ತೀರ್ಮಾನಗಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.