ನವದೆಹಲಿ/ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಜೆಇಇ ಮೇನ್ ಪರೀಕ್ಷೆ 2025 (ಸೆಷನ್ 2)ರ ಕೀ ಉತ್ತರಗಳನ್ನು ಪ್ರಕಟಿಸಿದೆ. ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳು ಅಂತಿಮ ಕೀ ಉತ್ತರಗಳನ್ನು ಅಧಿಕೃತ ವೆಬ್ಸೈಟ್ jeemain.nta.ac.in ರಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜೆಇಇ ಮೇನ್- 2025 ರ ಸೆಷನ್ 2 ಪೇಪರ್ 1 ಅನ್ನು ಏಪ್ರಿಲ್ 2, 3, 4, 7 ಮತ್ತು 8 ರಂದು ಬಿಇ/ಬಿ ಟೆಕ್ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಿತ್ತು. ಏಪ್ರಿಲ್ 9 ರಂದು ಪೇಪರ್ 2ಎ ಅನ್ನು ಪ್ರತ್ಯೇಕವಾಗಿ ಬಿಆರ್ಕ್ ಪ್ರವೇಶಕ್ಕೆ ನಡೆಸಲಾಗಿತ್ತು. ದೇಶಾದ್ಯಂತ 285 ನಗರಗಳಲ್ಲಿ ಮತ್ತು ಭಾರತದ ಹೊರಗಿನ 15 ನಗರಗಳೂ ಸೇರಿದಂತೆ 531 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳನ್ನು ಏಪ್ರಿಲ್ 11 ರಂದು ಬಿಡುಗಡೆ ಮಾಡಲಾಗಿತ್ತು ಮತ್ತು ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 13 ಕೊನೆಯ ದಿನವಾಗಿತ್ತು. ಅಭ್ಯರ್ಥಿಗಳಿಂದ ಸ್ವೀಕರಿಸಿದ ಆಕ್ಷೇಪಣೆಗಳ ಆಧಾರದ ಮೇಲೆ, ಪರೀಕ್ಷಾ ಸಂಸ್ಥೆ ಜೆಇಇ ಮೇನ್ 2025- ಸೇಶನ್ 2 ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿದೆ.