ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಎಸ್ಸಿ-ಎಸ್ಟಿ, ಒಬಿಸಿ ಅಷ್ಟೇ ಅಲ್ಲದೇ ಮೇಲ್ವರ್ಗದ ಸಮುದಾಯಗಳಿಗೂ ಅನ್ವಯಿಸುವಂತೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (EWS) ಶೇ.10 ರಷ್ಟು ಮೀಸಲಾತಿ ಕಲ್ಪಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಸಿಜೆಐ ಯುಯು ಲಲಿತ್ ಅವರನ್ನೊಳಗೊಂಡಂತೆ ಐವರು ನ್ಯಾಯಾಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ಸಂವಿಧಾನಕ್ಕೆ ತಂದಿರುವ 103ನೇ ತಿದ್ದುಪಡಿಯನ್ನು 3:2 ಬಹುಮತದೊಂದಿಗೆ ಪುರಸ್ಕರಿಸಿದೆ.
ನ್ಯಾ. ದಿನೇಶ್ ಮಹೇಶ್ವರಿ, ನ್ಯಾ. ಬೆಲಾ ತ್ರಿವೇದಿ, ನ್ಯಾ. ಜೆ.ಬಿ ಪರ್ದಿವಾಲ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದಿರುವ ಕ್ರಮ ಸರಿಯಿದೆ. ಕೇಂದ್ರದ ಈ ತಿದ್ದುಪಡಿ ಆದೇಶವು, ಮೀಸಲಾತಿಯು ಶೇ 50 ರಷ್ಟನ್ನು ಮೀರಬಾರದು ಎಂಬ ಸಂವಿಧಾನದ ರಚನೆ ಮತ್ತು ಆಶಯಕ್ಕೆ ವಿರುದ್ಧವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಸಿಜೆಐ ಉದಯ್ ಉಮೇಶ್ ಲಲಿತ್ ಹಾಗೂ ನ್ಯಾ. ಎಸ್ ರವೀಂದ್ರ ಅವರು ತಮ್ಮ ತೀರ್ಪಿನಲ್ಲಿ ಕೇಂದ್ರದ ತಿದ್ದುಪಡಿ ಸರಿಯಲ್ಲ ಎಂದಿದ್ದಾರೆ.
2019ರ ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಸಂವಿಧಾನಕ್ಕೆ 103ನೇ ತಿದ್ದುಪಡಿಯನ್ನು ತಂದು, ಆರ್ಟಿಕಲ್ 15 ಮತ್ತು 16ರಲ್ಲಿ ಕ್ಲಾಸ್ (6) ನ್ನು ಸೇರಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10 ರಷ್ಟು ಮೀಸಲು ಜಾರಿಗೆ ತಂದಿತ್ತು.
ಕೇಂದ್ರ ಸರ್ಕಾರದ ಈ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ 40ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿತ್ತು.
ಎಸ್ಸಿ-ಎಸ್ಟಿ, ಒಬಿಸಿ ವರ್ಗಗಳಿಗೆ ಶೇ 50ರಷ್ಟು ಮೀಸಲು ನೀಡಿರುವ ಹೊರತು, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10 ರಷ್ಟು ಮೀಸಲು ಕಲ್ಪಿಸಿರುವುದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದುದು ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಹಾಗೆಯೇ, ಸಂವಿಧಾನಕ್ಕೆ ತಿದ್ದುಪಡಿ ತಂದು ಎಲ್ಲ ವರ್ಗಗಳಿಗೂ ಅನ್ವಯಿಸುವಂತೆ ಆರ್ಥಿಕವಾಗಿ ಹಿಂದುಳಿದ ವರ್ಗಳಗಳಿಗೆ ಶೇ 10ರಷ್ಟು ಮೀಸಲು ನೀಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
