ಲೇಖನ: ಸುಧಾ ಜಿ, ಪ್ರಾಂಶುಪಾಲರು, ವಿಶ್ವೇಶ್ವರಪುರ ಕಾನೂನು ಕಾಲೇಜು
ಕನ್ನಡ ಭಾಷೆ ಶಿಕ್ಷಣ ಮಾಧ್ಯಮವಾಗಿ ಇರಬೇಕು ಎನ್ನುವಂತಹುದು ಭಾವುಕ ನೆಲೆಯಲ್ಲಿ ಸರಿ ಹಾಗೂ ವೈಚಾರಿಕ ನೆಲೆಯಲ್ಲಿಯೂ ಸರಿಯೇ. ಏಕೆಂದರೆ ಭಾವುಕ ನೆಲೆಯಲ್ಲಿ ಕನ್ನಡಕ್ಕೆ ತನ್ನದೇ ಆದ ಸಂಸ್ಕೃತಿ ಇದೆ. ಅದು ಕನ್ನಡ ಭಾಷೆ ಜೊತೆಯಲ್ಲಿದೆ. ಯಾವತ್ತು ಕನ್ನಡ ಭಾಷೆ ಎನ್ನುವಂತಹುದು ಹೋಗುತ್ತದೆಯೋ ಆ ಹೊತ್ತು ಕನ್ನಡ ಸಂಸ್ಕೃತಿ ನಾಶವಾಗುತ್ತದೆ. ನಮ್ಮ ಸಂಸ್ಕೃತಿ ಉಳಿಸಬೇಕು ಎನ್ನುವ ಕಾರಣಕ್ಕೆ ಭಾಷೆ ಮುಖ್ಯವಾಗುತ್ತದೆ.
ಇದುವರೆವಿಗೂ ಎಲ್ಲ ಶಿಕ್ಷಣ ತಜ್ಞರು ಹೇಳುತ್ತಿರುವುದು ಒಂದು ಮಗು ತನ್ನ ಮಾತೃ ಭಾಷೆಯಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಕಲಿತಾಗ ಹೆಚ್ಚು ಜ್ಞಾನವನ್ನು ತನ್ನದಾಗಿಸಿಕೊಳ್ಳಬಹುದು. ಆದರೆ ಇಂದು ಭಾಷೆಯನ್ನು ಮಾಹಿತಿ ನೀಡುವ ಸಂವಹನ ಮಾಧ್ಯಮವನ್ನಾಗಷ್ಟೆ ಪರಿಗಣಿಸಲಾಗಿದೆ.
ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಬಗ್ಗೆ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ ಸಮಸ್ಯೆ ಇರುವುದು ಕನ್ನಡವನ್ನು ಒಂದು ಮಾಧ್ಯಮವನ್ನಾಗಿ ಕಲಿಸುವ ವಿಚಾರದಲ್ಲಿ. ಈ ಎರಡು ಸಮಸ್ಯೆಗಳನ್ನು ಬಿಡಿಸಿಕೊಳ್ಳಬೇಕು. ಸುಪ್ರೀಂಕೋರ್ಟಿನ ತೀರ್ಪಿನ ಪ್ರಕಾರ ಶಿಕ್ಷಣ ಮಾಧ್ಯಮ ಎನ್ನುವುದು ಪಾಲಕರ ಇಚ್ಛೆಗೆ ಬಿಟ್ಟಿದ್ದು. ಆದರೆ ಇವತ್ತು ಯಾವ ಭಾಷಾ ಮಾಧ್ಯಮದಲ್ಲಿ ಕಲಿಸಬೇಕು ಎಂದು ನಿರ್ಧಾರ ಮಾಡುತ್ತಿರುವುದು ಖಾಸಗಿ ಶಾಲೆಗಳು. ಇಂಗ್ಲೀಷ್ ಮಾಧ್ಯಮದಲ್ಲಿ ಓದದೇ ಇರುವವರು ಅನಾಗರಿಕರು ಎಂಬಂತಹ ಜಾಹೀರಾತುಗಳನ್ನು ನಮ್ಮ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಮಕ್ಕಳ ಭಾಗ್ಯವಿಧಾತರೇ ನಾವು ಎಂಬ ಭಾವನೆಯನ್ನು ಶಿಕ್ಷಣ ಸಂಸ್ಥೆಗಳು ರೂಪಿಸಿಬಿಟ್ಟಿವೆ. ಇದನ್ನು ಹೋಗಲಾಡಿಸಲು ಮುಖ್ಯವಾಗಿ ಭಾಷೆ ಎನ್ನುವಂತಹುದು ಒಂದು ಮಾಧ್ಯಮ ಅಷ್ಟೇ ಎನ್ನುವ ಭಾವನೆಯನ್ನು ಬೆಳೆಸಬೇಕು.
ಇಂದು LPG ಗಳು ನಮ್ಮ ಭಾಷೆಗಳಿಗೆ ಬಹುದೊಡ್ಡ ಸವಾಲಾಗಿವೆ. ಏಕೆಂದರೆ ದಿನ ಕಳೆದಂತೆ ಸಾರ್ವಜನಿಕ ವಲಯದಲ್ಲಿದ್ದಂತ ಎಲ್ಲವು ಕೂಡ ಖಾಸಗಿ ವಲಯಕ್ಕೆ ಹೋಗುತ್ತಿವೆ. ಸಹಜವಾಗಿಯೇ ಅಲ್ಲಿ ನಿರೀಕ್ಷಿಸುವಂತಹ ಭಾಷೆ, ನಮ್ಮದಲ್ಲದ ಇನ್ಯಾವುದೋ ಭಾಷೆಯಾಗಿರುತ್ತದೆ. ಹಾಗಾಗಿ ಸಹಜವಾಗಿಯೇ ಆ ಭಾಷೆಯ ಹಿಂದೆ ಹೋಗುವುದನ್ನು ಯಾರೂ ತಡೆಯಲಾಗುತ್ತಿಲ್ಲ. ಹೀಗಾಗಿ, ಎಲ್ಲೋ ಒಂದು ಕಡೆ ಈ LPG ಗೂ ನಮ್ಮ ಭಾಷೆಗಳ ನಾಶಕ್ಕೂ ತುಂಬಾ ಹತ್ತಿರದ ಸಂಬಂಧವಿದೆ. ಅದರ ಜೊತೆಗೆ ಜಾಗತೀಕರಣ ಮತ್ತು ಖಾಸಗೀಕರಣದ ಸವಾಲುಗಳನ್ನು ಎದುರಿಸುವುದು ಕೂಡಾ ನಮ್ಮ ಮಾತೃಭಾಷಾ ಶಿಕ್ಷಣಕ್ಕೆ ಇರುವ ದೊಡ್ಡ ಸವಾಲು.
ಒಂದು ಭಾಷೆ ಬೆಳೆಯುವುದು ಅದು ಎಲ್ಲಾ ಕ್ಷೇತ್ರಗಳ ಶಬ್ದಗಳನ್ನು ತಾಳಿಕೊಳ್ಳಬಲ್ಲ ಜ್ಞಾನವನ್ನು ಗಳಿಸಿಕೊಂಡಾಗ. ಅದು ಗಳಿಸಿಕೊಳ್ಳುವುದು ನಾವು ಅದನ್ನು ಬಳಸಿದಾಗ. ನಾವು ಯಾವುದೋ ಒಂದು ಕ್ಷೇತ್ರದಲ್ಲಿ ಮಾತ್ರ ಬಳಸುತ್ತೇವೆ. ಇನ್ಯಾವುದೂ ಬೇಡ ಎನ್ನುವುದಾದರೆ ಒಂದು ಭಾಷೆ ಅಷ್ಟರಮಟ್ಟಿಗೆ ಅಶಕ್ತವಾಗುತ್ತದೆ, ಅಪ್ರಯೋಜಕವಾಗುತ್ತದೆ, ಅಂಗವಿಕಲವಾಗುತ್ತದೆ. ತುಂಬಾ ಜನ ಹೇಳುವ ಹಾಗೆ ಇಂದು ನಮ್ಮ ಪ್ರಾದೇಶಿಕ ಭಾಷೆಗಳು ಅಡುಗೆ ಮನೆ ಭಾಷೆ ಆಗುತ್ತಿವೆ. ಯಾವ ರೀತಿ ಸಂಸ್ಕೃತ ಭಾಷೆ ಕೇವಲ ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರ ಉಳಿದುಕೊಂಡಿದೆಯೋ ಅದೇ ರೀತಿ ಆಯಾ ಪ್ರಾದೇಶಿಕ ಭಾಷೆಗಳು ಅಡುಗೆ ಮನೆಗೆ ಸೀಮಿತವಾಗುವ ಸಂದರ್ಭ ಉಂಟಾಗುತ್ತಿದೆ. ಆದ್ದರಿಂದ ನಮ್ಮ ಮಾತೃಭಾಷೆಯನ್ನು ಉಳಿಸಿಕೊಳ್ಳುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
