Law

ವಶಪಡಿಸಿಕೊಂಡ ವಾಹನಗಳನ್ನು ಬಾಂಡ್ ಪಡೆದು ಬಿಡುಗಡೆ ಮಾಡಿ: ಹೈಕೋರ್ಟ್

Share It

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111

ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಅನಗತ್ಯವಾಗಿ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿಕೊಳ್ಳಬೇಡಿ. ಬದಲಿಗೆ ಶ್ಯೂರಿಟಿ ಪಡೆದು ಬಿಡುಗಡೆ ಮಾಡಿ ಎಂದು ಹೈಕೋರ್ಟ್ ಸೂಚಿಸಿದೆ.

ವಾಹನ ಬಿಡುಗಡೆ ಮಾಡಲು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಜವ್ವಾಜಿ ಧನತೇಜ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ. ನಟರಾಜನ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.

ಪೀಠ ತನ್ನ ಆದೇಶದಲ್ಲಿ, ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ವಾಹನಗಳನ್ನು ವಿನಾಕಾರಣ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ.

ಹಲವು ವರ್ಷಗಳ ಕಾಲ ಠಾಣೆಯ ಮುಂದೆ ನಿಲ್ಲುವ ವಾಹನಗಳು ನಿಧಾನವಾಗಿ ಹಾಳಾಗುತ್ತವೆ. ದಿನ ಕಳೆದಂತೆ ಅವುಗಳನ್ನು ಗುರುತಿಸುವುದಕ್ಕೂ ಸಾಧ್ಯವಾಗದ ಮತ್ತು ನ್ಯಾಯಾಲಯಕ್ಕೆ ತರಲಿಕ್ಕೂ ಆಗದ ಸ್ಥಿತಿ ತಲುಪುತ್ತವೆ.

ಆದ್ದರಿಂದ ಸುಪ್ರೀಂ ಕೋರ್ಟ್ ಸುಂದರ್ ಬಾಯ್ ಅಂಬಲಾಲ್ ವರ್ಸಸ್ ಗುಜರಾತ್ ಸರ್ಕಾರ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳ ಅನ್ವಯ ವಾಹನಗಳನ್ನು ಅವುಗಳ ಮಾಲಿಕರಿಗೆ ಬಾಂಡ್ ಪಡೆದುಕೊಳ್ಳುವುದು ಸೇರಿದಂತೆ ಅಗತ್ಯ ಷರತ್ತುಗಳನ್ನು ವಿಧಿಸುವ ಮೂಲಕ ಹಿಂದಿರುಗಿಸಬೇಕು.

ಅಲ್ಲದೇ, ವಾಹನ ಬಿಡುಗಡೆಗೂ ಮುನ್ನ ಪಂಚರ ಸಮಕ್ಷಮದಲ್ಲಿ ವಿವಿಧ ಕೋನಗಳಲ್ಲಿ ವಾಹನದ ಫೋಟೋಗಳನ್ನು ಚಿತ್ರಿಸಿಕೊಳ್ಳಬೇಕು. ಈ ಫೋಟೋಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಡಾ ಸಿಟಿ ಕಾರು, ಬೈಕ್ ಹಾಗೂ ಆಟವೊಂದನ್ನು ವಶಕ್ಕೆ ಪಡೆದಿದ್ದರು. ಈ ವಾಹನಗಳ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಮಾನ್ಯಮ ಮಾಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ವಾಹನಗಳ ಮಾಲಿಕರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಸ್ತುತ ಪ್ರಕರಣದಲ್ಲಿ ವಾಹನಗಳ ಮಾಲಿಕರು ಅಪರಾಧಿಗಳಲ್ಲ. ವಾಹನಗಳನ್ನಷ್ಟೇ ಅಪರಾಧ ಪ್ರಕರಣದಲ್ಲಿ ಬಳಸಿರುವ ಆರೋಪವಿದೆ. ಹೀಗಾಗಿ ವಾಹನಗಳ ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸದೇ ಇರುವುದು ಸರಿ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ಹೋಂಡಾ ಸಿಟಿ ಕಾರಿಗೆ 3 ಲಕ್ಷ, ಹೋಂಡಾ ಡಿಯೋ ಬೈಕ್ ಗೆ 30 ಸಾವಿರ ಹಾಗೂ ಆಟೋ ರಿಕ್ಷಾಗೆ 75 ಸಾವಿರ ರೂಪಾಯಿ ಮೊತ್ತದ ಬಾಂಡ್ ಪಡೆದು ವಾಹನಗಳನ್ನು ಅವುಗಳ ಮಾಲಿಕರಿಗೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.

(CRL.P 9257/2022)


Share It

You cannot copy content of this page