ಬೆಂಗಳೂರು: ಪ್ರಾಚೀನ ಕಾಲದ ನಾಣ್ಯಗಳ ಅಧ್ಯಯನ ಮಾಡಿದಾಗ ಅವುಗಳನ್ನು ಟಂಕಿಸಲು ನಮ್ಮ ಪ್ರಾಚೀನರು ಕಂಡುಕೊಂಡಿದ್ದ ತಂತ್ರಜ್ಞಾನ ಮತ್ತು ತಂತ್ರಗಾರಿಕೆಯು ನಮ್ಮ ಪ್ರಾಚೀನ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥೆಯ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವೃತ್ತದ ಅಧೀಕ್ಷಕ ಬಿಪಿನ್ ಚಂದ್ರ ನೇಗಿ ತಿಳಿಸಿದರು.
ಭಾನುವಾರ ನೃಪತುಂಗ ರಸ್ತೆಯ ದಿ ಮಿಥಿಕ್ ಸೊಸೈಟಿ ಮತ್ತು ಚೆನೈ ಸೌತ್ ಇಂಡಿಯನ್ ನ್ಯೂಮಿಸ್ ಮ್ಯಾಟಿಕ್ ಸೊಸೈಟಿ ಜಂಟಿಯಾಗಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾಣ್ಯಶಾಸ್ತ್ರದ ಅಧ್ಯಯನ ಸಂಶೋಧನಾ ಕೇಂದ್ರಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಮತ್ತಷ್ಟು ವಿಸ್ತರಿಸುವ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು.
ಭಾರತೀಯ ನಾಣ್ಯಗಳ ಕುರಿತ ಆಲೋಚನೆಗಳು ವಿಷಯದ ಕುರಿತು ಮಾತನಾಡಿದ ಮಿಥಿಕ್ ಸೊಸೈಟಿಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ವಿ.ಪಾಡಿಗಾರ್, ಬಳ್ಳಾರಿ ಜಿಲ್ಲೆಯ ಕುಡತಿನಿ ಪ್ರಾಚೀನ ಕಾಲದ ಒಂದು ಹೆಸರಾಂತ ಟಂಕಸಾಲೆಯಾಗಿತ್ತು. ಇಲ್ಲಿ ಬೇರೆ ಬೇರೆ ರೀತಿಯ ಅಚ್ಚುಗುರುತು ಹಾಕಿದ ನಾಣ್ಯಗಳನ್ನು ವಿಶಿಷ್ಟವಾದ ರೀತಿಯಲ್ಲಿ ಬಂಗಾರ ಮತ್ತು ಬೆಳ್ಳಿಯಲ್ಲಿ ಟಂಕಿಸಲಾಗುತ್ತಿದ್ದು ಎಂದು ಮಾಹಿತಿ ನೀಡಿದರು.
ಪ್ರಾಚೀನ ಭಾರತದಲ್ಲಿ ಇಂಡೋ-ಗ್ರೀಕ್ ಮತ್ತು ಇಂಡೋ-ರೋಮನ್ ನಾಣ್ಯಗಳು ಚಲಾವಣೆಯಲ್ಲಿದ್ದವು. ಕುಶಾನರು, ಮೌರ್ಯರು ಮತ್ತು ಗುಪ್ತರ ನಾಣ್ಯಗಳೂ ಹೆಸರು ವಾಸಿಯಾಗಿವೆ. ದಕ್ಷಿಣ ಭಾರತದಲ್ಲಿ ಶಾತವಾಹನರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರಾದಿಯಾಗಿ ಟಂಕಿಸಿದ್ದ ನಾಣ್ಯಗಳು ಮತ್ತು ಅವುಗಳ ಮೇಲೆ ಕಂಡುಬರುವ ವಿಶಿಷ್ಟವಾದ ಚಿತ್ರಗಳು, ಸಂಜ್ಞೆಗಳು ಮತ್ತು ಬರಹಗಳು ಇತಿಹಾಸದ ಅಧ್ಯನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು.
ನಾಣ್ಯದ ಅಧ್ಯಯನ ಕೇವಲ ಆರ್ಥಿಕತೆಯ ಸಂಕೇತವಾಗಿರದೆ ಅವುಗಳ ಮೇಲೆ ಮೂಡಿಸಲಾಗಿರುವ ಆ ಕಾಲದ ದೊರೆಗಳ ಚಿತ್ರಗಳು, ಅವುಗಳಿಗೆ ಸಂಬಂಧಿಸಿದ ದಂತ ಕಥೆಗಳು, ಧಾರ್ಮಿಕ ಚಿನ್ಹೆಗಳು ಮತ್ತು ಲಿಪಿಗಳು ಒಟ್ಟಾರೆಯಾಗಿ ಐತಿಹಾಸಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಿದಾಗ ಇತಿಹಾಸದ ಹಲವು ವಿಶಿಷ್ಟವಾದ ಮಜಲುಗಳನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್ ಅವರು ಮಾತನಾಡಿ, ಸಂಶೋಧನೆಯ ನಂತರ ಕಂಡುಬರುವ ಹೊಸ ವಿಷಯಗಳನ್ನು ಜನಸಾಮಾನ್ಯರಿಗೂ ತಿಳಿಸುವ ಪ್ರಮುಖ ಜವಾಬ್ದಾರಿ ಸಂಶೋಧಕರ ಮೇಲಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಕಾರ್ಯೋನ್ಮುಖವಾಗಿರುವ ಮಿಥಿಕ್ ಸೊಸೈಟಿಯಂತಹ ಎಲ್ಲ ಕೇಂದ್ರಗಳು ಜಂಟಿಯಾಗಿ ಒಂದು ಒಕ್ಕೂಟವನ್ನು ರಚಿಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ ಎಂದು ನುಡಿದರು.
ಈ ವೇಳೆ ಸೌತ್ ಇಂಡಿಯನ್ ನ್ಯೂಮಿಸ್ ಮ್ಯಾಟಿಕ್ ಸೊಸೈಟಿಯ ಅಧ್ಯಕ್ಷ ಡಾ. ಡಿ. ರಾಜಾರೆಡ್ಡಿ ತಮ್ಮ ಸೊಸೈಟಿಯ ಸಂಶೋಧನಾ ಕಾರ್ಯಗಳ ವಿವರಗಳನ್ನು ನೀಡಿದರು.
ಸೊಸೈಟಿಯ ಕಾರ್ಯದರ್ಶಿ ಡಾ. ಸಿ. ಸತ್ಯಮೂರ್ತಿ, ದಿ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯ ಎಂ.ಆರ್. ಪ್ರಸನ್ನ ಕುಮಾರ್, ಸೌತ್ ಇಂಡಿಯನ್ ನ್ಯೂಮಿಸ್ ಮ್ಯಾಟಿಕ್ ಸೊಸೈಟಿಯ ಸಂಶೋಧನಾ ಪತ್ರಿಕೆಯ ಸಂಪಾದಕ ಡಾ. ರಾಧಾಕೃಷ್ಣನ್, ಖಜಾಂಚಿ ಕಲಾವತಿ ಸೇರಿದಂತೆ ಇತರರಿದ್ದರು.
