Law News

ಕಾಲ್ತುಳಿತ ಘಟನೆ ಪ್ರಕರಣ; ಜೂ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

Share It

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸದಲ್ಲಿ ಅಧಿಕ ಪ್ರಮಾಣದ ಅಭಿಮಾನಿಗಳು ಕಾಲ್ತುಳಿತಕ್ಕೆ ಸಿಲುಕಿ 11 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಈ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಯನ್ನು ಪರಿಗಣಿಸಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ಸಿ.ಎಂ.ಜೋಶಿ ಅವರಿದ್ದ ಪೀಠ, ಪ್ರಕರಣದ ಸಂಬಂಧ ಕಾಗ್ನಿಜೆನ್ಸ್ ತೆಗೆದುಕೊಂಡು, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಮುಂದಿನ ಮಂಗಳವಾರದ ಒಳಗಾಗಿ ಪ್ರಕರಣ ಸಂಬಂಧಿಸಿದಂತೆ ವರದಿ ಸಲ್ಲಿಸಬೇಕು. ವರದಿಯನ್ನು ಆಧರಿಸಿ ಮುಂದಿನ ಆದೇಶಗಳನ್ನು ನೀಡಲಾಗುವುದು ಎಂದು ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಬೇರೆ ರಾಜ್ಯಗಳಿಂದಲೂ ಸಂಭ್ರಮಚರಣೆಗೆ ನಿರೀಕ್ಷೆಗೂ ಮೀರಿ ಜನ ಭೇಟಿ ನೀಡಿದ್ದರು. ಪ್ರಾರಂಭದಲ್ಲಿ ಟಿಕೆಟ್ ಪರಿಚಯಿಸಿದ್ದ ಕ್ರೀಡಾಂಗಣ ಆಡಳಿತ ಮಂಡಳಿ, ಬಳಿಕ ಉಚಿತ ಪ್ರವೇಶಕ್ಕೆ ಅವಕಾಶವಿರಲಿದೆ ಎಂದು ತಿಳಿಸಿತ್ತು. ಇದರಿಂದ ಸುಮಾರು 2.5 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ ಕಾರಣವಾಗಿದೆ. ಘಟನೆಯಿಂದಾಗಿ 11 ಜನ ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ ಎಂದರು.

ವಿಜಯೋತ್ಸವದ ನಿಮಿತ್ತ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ರಾತ್ರಿಯಿಂದಲೇ ಭದ್ರತಾ ಕಾರ್ಯಗಳನ್ನು ಮಾಡಿಕೊಂಡಿತ್ತು. ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು 1,600 ಮಂದಿ ಪೊಲೀಸರನ್ನು ನಿಯೋಜನೆ ಮಾಡಿತ್ತು. ಸದ್ಯ ಪ್ರಕರಣ ಸಂಬಂಧ ಆರ್‌ಸಿಬಿ ಆಡಳಿತ ಮಂಡಳಿ, ಕೆಎಸ್‌ಸಿಎ, ಚಿನ್ನಸ್ವಾಮಿ ಆಡಳಿತ ಮಂಡಳಿ ವಿರುದ್ಧ ಈಗಾಗಲೇ ಎ್‌ಐಆರ್ ದಾಖಲಾಗಿದೆ. ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲಾಗಿದೆ. 15 ದಿನದಲ್ಲಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ನ್ಯಾಯಾಲಯ ಮುಂದೆ ಹಾಜರುಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ವೇಳೆ ನ್ಯಾಯಪೀಠ, ಈ ರೀತಿಯ ಘಟನೆಗಳು ನಡೆದ ಸಂದರ್ಭದಲ್ಲಿ ಅನುಸರಿಸಲು ಸ್ಟ್ಯಾಂಡಿಂಗ್ ಆಪರೇಷನ್ ಪ್ರೊಸೀಜರ್ (ಎಸ್‌ಒಪಿ ) ಇದೆಯೇ ಎಂದು ಪ್ರಶ್ನಿಸಿತು. ಅಲ್ಲದೇ, ಇಂತಹ ಘಟನೆಗಳು ಸಂಭವಿಸಿದಾಗ ಗಾಯಾಳುಗಳನ್ನು ಯಾವ ವಾಹನಗಳ ಮೂಲಕ ಆಸ್ಪತ್ರೆಗೆ ಸಾಗಿಸಬೇಕು ಎಂಬ ಅಂಶಗಳೂ ಎಸ್‌ಒಪಿಯಲ್ಲಿ ಸೇರಿಸಿರಬೇಕು ಎಂದು ಪೀಠ ತಿಳಿಸಿತು. ಘಟನಾ ಸ್ಥಳದಲ್ಲಿ ಮತ್ತಷ್ಟು ಆಂಬುಲೆನ್ಸ್‌ಗಳು ಇರಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ವಿಚಾರಣೆಯ ವೇಳೆ ಹಿರಿಯ ವಕೀಲ ಅರಣ್ ಶ್ಯಾಮ್, ಘಟನೆಯ ವೇಳೆ ಆಂಬ್ಯುಲೆನ್ಸ್ ಯಾವ ಜಾಗದಲ್ಲಿ ನಿಯೋಜಿಸಲಾಗಿತ್ತು? ಎಂಬ ಅಂಶಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ಕೋರಿದರು. ಬಳಿಕ ಮುಂದಿನ ಕ್ರಮಗಳ ಕುರಿತಂತೆ ಎಲ್ಲ ಅರ್ಜಿದಾರರ ವಾದವನ್ನು ಆಲಿಸಿದ ನಂತರ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿತು.


Share It

You cannot copy content of this page