News

ಪೊಲೀಸರಿಗೆ ಸಮವಸ್ತ್ರ-ಅಧಿಕಾರ ನೀಡಿರುವುದು ದರ್ಪ ತೋರಿಸಲಿಕ್ಕಲ್ಲ: ಕೋರ್ಟ್ ತರಾಟೆ

Share It

ಉನ್ನತ ಹಂತದ ಅಧಿಕಾರಿಯೊಬ್ಬರಿಗೆ ಕೋರ್ಟ್ ನಲ್ಲಿ ಸಾಕ್ಷ್ಯ ಹೇಳಲು ವಾಟ್ಸಾಪ್ ಮೂಲಕ ಸಮನ್ಸ್ ಕಳುಹಿಸಿದ್ದ ಪೊಲೀಸ್ ಕಾನ್ಸಟೇಬಲ್ ನಡವಳಿಕೆಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ನಗರದ ಎನ್.ಡಿ.ಪಿ.ಎಸ್ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಬರುವಂತೆ ಕಸ್ಟಮ್ಸ್ ಹಿರಿಯ ಅಧಿಕಾರಿಯೊಬ್ಬರಿಗೆ ಪೊಲೀಸರು ವಾಟ್ಸಾಪ್ ಮೂಲಕ ಸಮನ್ಸ್ ಕಳುಹಿಸಿದ್ದರು. ಪೊಲೀಸರ ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಪೊಲೀಸರಿಗೆ ಚಾಟಿ ಬೀಸಿತು.

ಪೊಲೀಸರಿಗೆ ಖಾಕಿ ಸಮವಸ್ತ್ರ ಮತ್ತು ಅಧಿಕಾರ ನೀಡಿರುವುದು ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳಲಿ ಎಂಬ ಕಾರಣಕ್ಕಾಗಿಯೇ ಹೊರತು ಜನರ ಮೇಲೆ ದರ್ಪ ತೋರಿಸಲಿಕ್ಕಲ್ಲ. ಆರೋಪಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ನಿಮ್ಮ ಗುಣವನ್ನು ಇತರರ ಮೇಲೂ ತೋರಬೇಡಿ ಎಂದು ನ್ಯಾಯಾಧೀಶರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೇ, ಚಾರ್ಜ್ ಶೀಟ್ ಹಾಕುವವರೆಗಷ್ಟೇ ಪೊಲೀಸ್ ಇನ್ಸಪೆಕ್ಟರ್ ಗಳು ಉತ್ಸಾಹ ತೋರಿಸುತ್ತಾರೆ. ನಂತರ ಕೋರ್ಟ್ ವಿಚಾರಣೆಗೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಾರೆ. ಕೋರ್ಟ್ ಕೆಲಸಗಳನ್ನು ಠಾಣೆಯ ಕಾನ್ಸಟೇಬಲ್ ಗೆ ವಹಿಸಿ ನಿರ್ಲಕ್ಷ್ಯ ತೋರುತ್ತಾರೆ. ಪೊಲೀಸರ ಇಂತಹ ನಡವಳಿಕೆಯನ್ನು ಸಹಿಸಲಾಗದು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದರು.

ಇನ್ನು ಕಸ್ಟಮ್ಸ್ ಹಿರಿಯ ಅಧಿಕಾರಿಗೆ ವಾಟ್ಸಾಪ್ ಮೂಲಕ ಸಮನ್ಸ್ ಜಾರಿ ಮಾಡಿದ ಕುರಿತಂತೆ ಸಂಬಂಧಪಟ್ಟ ಇನ್ಸಪೆಕ್ಟರ್ ವಿವರಣೆ ನೀಡುವಂತೆ ತಾಕೀತು ಮಾಡಿದರು. ಹಾಗೆಯೇ, ಹಿರಿಯ ಅಧಿಕಾರಿಗಳ ಬಗ್ಗೆ ಗೌರವದಿಂದ ಹಾಗೂ ಜನರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳುವಂತೆ ಬುದ್ದಿ ಹೇಳಿದರು.


Share It

You cannot copy content of this page