ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111
ಅಪಘಾತ ಪ್ರಕರಣದಲ್ಲಿ ತೀವ್ರ ಅಂಗ ವೈಕಲ್ಯಕ್ಕೆ ತುತ್ತಾಗಿದ್ದ ಸಂತ್ರಸ್ತನಿಗೆ 11 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿದ್ದ ವಿಮಾ ಸಂಸ್ಥೆಗೆ ಇದೀಗ ಹೈಕೋರ್ಟ್ 44 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.
ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ 11 ಲಕ್ಷ ಪರಿಹಾರ ನೀಡಲು ಹೊರಡಿಸಿದ್ದ ಆದೇಶ ಪ್ರಶ್ನಿಸಿ ವಿಮಾ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಪಿ ಸಂದೇಶ್ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಅಪಘಾತಕ್ಕೆ ತುತ್ತಾಗಿರುವ ಸಂತ್ರಸ್ತ ಅಲ್ವಿನ್ ಲೋಬೊ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದರು. ಮಾಸಿಕ 91 ಸಾವಿರಕ್ಕೂ ಹೆಚ್ಚು ವೇತನ ಪಡೆಯುತ್ತಿದ್ದರು. ಅಪಘಾತದ ಸಂದರ್ಭದಲ್ಲಿ ಅವರಿಗೆ 29 ವರ್ಷ ವಯಸ್ಸಾಗಿತ್ತು.
ಅಪಘಾತದ ಬಳಿಕ ಅವರು ಶೇ.65 ರಷ್ಟು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಚಿಕಿತ್ಸೆಗಾಗಿ 5 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದರೆ ಅವರಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಪರಿಹಾರ ಮೊತ್ತವನ್ನು 11.39 ಲಕ್ಷದ ಬದಲಿಗೆ 44.92 ಲಕ್ಷಕ್ಕೆ ಹೆಚ್ಚಿಸಿದೆ. ಈ ಮೊತ್ತವನ್ನು ವಾರ್ಷಿಕ ಶೇ 6ರ ಬಡ್ಡಿ ದರದೊಂದಿಗೆ 6 ವಾರಗಳಲ್ಲಿ ಪಾವತಿಸುವಂತೆ ವಿಮಾ ಸಂಸ್ಥೆಗೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಮಂಗಳೂರಿನ ಮೂಡುಬಿದರೆ ನಿವಾಸಿ ಅಲ್ವಿನ್ ಲೋಬೊ 2009ರಲ್ಲಿ ಸೋದರನೊಂದಿಗೆ ಬೈಕ್ ನಲ್ಲಿ ಪ್ರಯಾಣಿಸುವಾಗ ಆಟೋಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಪರಿಣಾಮ ಲೋಬೊ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ 5.24 ಲಕ್ಷ ಖರ್ಚು ಮಾಡಿದ್ದರು.
ಅಪಘಾತ ಪ್ರಕರಣದ ವಿಚಾರಣೆ ನಡೆಸಿದ್ದ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ ಸಂತ್ರಸ್ತ ಲೋಬೊ ಅವರಿಗೆ 11,39,340 ರೂ ಪರಿಹಾರ ನೀಡುವಂತೆ 2015ರಲ್ಲಿ ಆದೇಶಿಸಿತ್ತು.
ಅಪಘಾತವೇ ನಡೆದಿಲ್ಲವೆಂದು ವಾದ- ಈ ಆದೇಶ ಪ್ರಶ್ನಿಸಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಹೈಕೋರ್ಟ್ ಗೆ ಮೆಟ್ಟಿಲೇರಿತ್ತು. ವಿಮಾ ಸಂಸ್ಥೆ ಪರ ವಕೀಲರು, ಪ್ರಕರಣದಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ. ಬೈಕ್ ಸವಾರರು ಆಯ ತಪ್ಪಿ ಬಿದ್ದು ನಂತರ ಆಟೋ-ಬೈಕ್ ನಡುವೆ ಡಿಕ್ಕಿಯಾಗಿದೆ ಎಂದು ಪ್ರಕರಣವನ್ನು ತಿರುಚಿದ್ದಾರೆ. ಆಟೋ ಚಾಲಕ ಹಾಗೂ ಬೈಕ್ ಸವಾರರು ನೆರೆಹೊರೆಯವರಾಗಿದ್ದು, ಪೊಲೀಸರೊಂದಿಗೆ ಸೇರಿ ದಾಖಲೆ ತಿರುಚಿ ಪರಿಹಾರ ಕೇಳಿದ್ದಾರೆ. ಹೀಗಾಗಿ ನ್ಯಾಯಾಧಿಕರಣದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.
ವಾದ ಪರಿಗಣಿಸಲು ನಿರಾಕರಿಸಿರುವ ಹೈಕೋರ್ಟ್, ಆಟೋ ಚಾಲಕ ಪರಿಚಯದ ವ್ಯಕ್ತಿ ಎಂಬುದು ನಿಜವಾದರೂ, ಆತ ನ್ಯಾಯಮಂಡಳಿ ಎದುರು ಅಪಘಾತ ನಡೆದಿರುವ ಕುರಿತು ಒಪ್ಪಿಕೊಂಡಿದ್ದಾನೆ. ಆಟೋ-ಬೈಕ್ ನಡುವೆ ಅಪಘಾತ ನಡೆದಿಲ್ಲ ಎಂಬುದಕ್ಕೆ ವಿಮಾ ಸಂಸ್ಥೆ ಯಾವುದೇ ದಾಖಲೆ ಒದಗಿಸಿಲ್ಲ. ಆದ್ದರಿಂದ ವಿಮಾ ಸಂಸ್ಥೆಯ ವಾದ ಒಪ್ಪಲಾಗದು ಎಂದಿದೆ.
(M.F.A.NO.8449/2015)