ವೃತ್ತಿ ದುರ್ನಡತೆ ಆರೋಪದಡಿ ವಕೀಲ ಕೆಬಿ ನಾಯಕ್ ಅವರನ್ನು ವಕೀಲಿಕೆ ನಡೆಸದಂತೆ ಅಮಾನತು ಮಾಡಿ ಭಾರತೀಯ ವಕೀಲರ ಪರಿಷತ್ತು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಇದೇ ವೇಳೆ ಕಾನೂನು ಅಭ್ಯಾಸ ಮಾಡುತ್ತಿರುವ ವಕೀಲರನ್ನು ಅವರ ವಾದ ಆಲಿಸದೇ ಅಥವಾ ಸಮರ್ಥಿಸಿಕೊಳ್ಳಲು ಅವಕಾಶ ನೀಡದೇ ಎಕ್ಸ್-ಪಾರ್ಟಿಯಾಗಿ ಪರಿಗಣಿಸಿ ವೃತ್ತಿ ನಿರ್ಬಂಧ ಹೇರುವ ಅಧಿಕಾರ ಭಾರತೀಯ ವಕೀಲರ ಪರಿಷತ್ತಿಗೆ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ವಕೀಲ ಕೆ.ಬಿ ನಾಯಕ್ ವಿರುದ್ಧ ವೃತ್ತಿ ದುರ್ನಡತೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಕೀಲರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ್ದ ಬಿಸಿಐ ಅರ್ಜಿ ಇತ್ಯರ್ಥವಾಗುವವರೆಗೆ ದೇಶದ ಯಾವುದೇ ನ್ಯಾಯಾಲಯದಲ್ಲಿ ವಕೀಲಿಕೆ ನಡೆಸಬಾರದು ಎಂದು ಆದೇಶಿಸಿತ್ತು.
ಬಿಸಿಐನ ಈ ಆದೇಶ ಪ್ರಶ್ನಿಸಿ ವಕೀಲರಾದ ಕೆ.ಬಿ ನಾಯಕ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಬಿಸಿಐ ಆದೇಶವನ್ನು ರದ್ದುಪಡಿಸಿದೆ.
ಅಲ್ಲದೇ, ವಕೀಲರ ವಿರುದ್ಧ ವೃತ್ತಿ ದುರ್ನಡತೆ ಆರೋಪ ಕೇಳಿ ಬಂದಾಗ ವಕೀಲರ ಕಾಯ್ದೆ-1961 ರ ಸೆಕ್ಷನ್ 48 ಎ(2) ರ ಪ್ರಕಾರ ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡದೇ ಯಾವುದೇ ಕ್ರಮ ಜರುಗಿಸುವಂತಿಲ್ಲ. ಸಮರ್ಥನೆಗೆ ಅವಕಾಶ ನೀಡದೇ ಬಿಸಿಐ ಹೊರಡಿಸಿರುವ ಆದೇಶ ಸಹಜ ನ್ಯಾಯ ತತ್ವದ ಉಲ್ಲಂಘನೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಬಿಸಿಐ ಸೆಪ್ಟೆಂಬರ್ 26ರಂದು ವಕೀಲ ಕೆ.ಬಿ ನಾಯಕ್ ವಕೀಲಿಕೆ ಮಾಡದಂತೆ ನಿರ್ಬಂಧಿಸಿ ವಿಧಿಸಿದ್ದ ಮಧ್ಯಂತರ ಆದೇಶವನ್ನು ರದ್ದುಪಡಿಸಿರುವ ಪೀಠ, ಈ ಸಂಬಂಧ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಯನ್ನು ಹೊಸದಾಗಿ ಪರಿಗಣಿಸುವಂತೆ ಸೂಚಿಸಿದೆ. ಹಾಗೆಯೇ, ಆರೋಪ ಹೊತ್ತಿರುವ ವಕೀಲರಿಗೂ ತಮ್ಮನ್ನು ಸಮರ್ಥಿಸಿಕೊಳ್ಳಲು ಸೂಕ್ತ ಅವಕಾಶ ನೀಡಿದ ನಂತರವೇ ಆದೇಶ ಹೊರಡಿಸುವಂತೆ ನಿರ್ದೇಶಿಸಿದೆ.
ಆರೋಪವೇನು: ವಕೀಲ ಕೆ.ಬಿ ನಾಯಕ್ ನ್ಯಾಯಾಂಗ ಬಂಧನದಲ್ಲಿದ್ದ ಬೆಳಗಾವಿಯ ಬಸವರೆಡ್ಡಿ ವೆಂಕರೆಡ್ಡಿ ಚುಳಕಿ ಅವರ ಸಹಿ ಪಡೆದು ನಕಲಿ ಜಿಪಿಎ ಸೃಷ್ಟಿಸಿ ಅವರಿಗೆ ಸೇರಿದ್ದ ಜಮೀನು ಮಾರಾಟ ಮಾಡಿದ್ದಾರೆ. ಈ ವಿಚಾರ ಜೈಲಿನಿಂದ ಹೊರಬಂದ ಮೇಲೆ ಬಸವರಡ್ಡಿ ಅವರಿಗೆ ತಿಳಿಯಿತು ಎಂದು ಆರೋಪಿಸಿ ವಕೀಲರಾದ ಬಸವರಾಜ ಮುರುಗೇಶ ಜರಳಿ ಅವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ದೂರು ನೀಡಿದ್ದರು. ಅಲ್ಲದೇ, ವಕೀಲ ಕೆ.ಬಿ ನಾಯಕ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿದ್ದರು.
ಕೆ.ಎಸ್.ಬಿ.ಸಿ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಭಾರತೀಯ ವಕೀಲರ ಪರಿಷತ್ತಿಗೆ ದೂರು ನೀಡಲಾಗಿತ್ತು. ದೂರಿನ ವಿಚಾರಣೆ ನಡೆಸಿದ್ದ ಭಾರತೀಯ ವಕೀಲರ ಪರಿಷತ್ತು ಪ್ರಕರಣ ಇತ್ಯರ್ಥವಾಗವವರೆಗೆ ವಕೀಲ ಕೆ.ಬಿ ನಾಯಕ್ ಯಾವುದೇ ನ್ಯಾಯಾಲಯದಲ್ಲಿ ವಕೀಲಿಕೆ ನಡೆಸಬಾರದು ಎಂದು ಮಧ್ಯಂತರ ಆದೇಶ ಮಾಡಿತ್ತು. ಬಿಸಿಐನ ಈ ಆದೇಶ ಪ್ರಶ್ನಿಸಿ ವಕೀಲ ಕೆ.ಬಿ ನಾಯಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.
WRIT PETITION NO. 20983 OF 2022 (GM-RES)
