News

ಸಂವಿಧಾನವೇ ಸುಪ್ರೀಂ: ನ್ಯಾ. ಹೆಚ್.ಪಿ ಸಂದೇಶ್ ಅಭಿಮತ

Share It

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕಿಂತಲೂ ಸಂವಿಧಾನವೇ ಸುಪ್ರೀಂ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಶಾಸಕಾಂಗ ಮತ್ತು ಕಾರ್ಯಾಂಗವೂ ನ್ಯಾಯಾಂಗದ ಜೊತೆ-ಜೊತೆಗೆ ಕಾರ್ಯ ನಿರ್ವಹಿಸಿದಾಗ ಮಾತ್ರ ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ವಿಶ್ವೇಶ್ವರಪುರ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಸಂವಿಧಾನ ರಚನಾಕಾರರನ್ನು ಸ್ಮರಿಸಿ ಮಾತನಾಡಿದರು.

ಕಾನೂನು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ಭಾರತ. ಇಂತಹ ದೇಶಕ್ಕೆ ಅಗತ್ಯವಾದ ಸದೃಢವಾದ ಶ್ರೇಷ್ಠ ಸಂವಿಧಾನ ರಚನೆಯಲ್ಲಿ, ರಚನಾ ಸಮಿತಿ ಸದಸ್ಯರ ಪರಿಶ್ರಮ ಅನನ್ಯವಾದುದು. 389 ಸದಸ್ಯರಲ್ಲಿ ಬಹುಪಾಲು ಸದಸ್ಯರು ವಕೀಲರಾಗಿದ್ದವರು. ಅವರೆಲ್ಲಾ ತಮ್ಮ ವಕೀಲಿ ವೃತ್ತಿಯನ್ನು ಬದಿಗೊತ್ತಿ, 2 ವರ್ಷ 11 ತಿಂಗಳ ಕಾಲ ಸುಧೀರ್ಘವಾಗಿ ಸಂವಿಧಾನ ರಚನೆಗೆ ಕಾರ್ಯನಿರ್ವಹಿಸಿದ್ದಾರೆ.

ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯ ಸಮಿತಿ ಸಂವಿಧಾನ ರಚನೆ ಮಾಡಿದ್ದು, ಡಾ. ಬಿ.ಆರ್ ಅಂಬೇಡ್ಕರ್ ಸೇರಿದಂತೆ ನೂರಾರು ಜನ ಸಮರ್ಥ ಶ್ರೇಷ್ಠ ನಾಯಕರು ಕಲ್ಯಾಣ ರಾಷ್ಟದ ಅಭ್ಯುದಯಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ರಾಜ್ಯಗಳನ್ನು ಒಂದುಗೂಡಿಸಿ ರಾಷ್ಟ್ರದ ಐಕ್ಯತೆ, ಸಮಗ್ರತೆಗೆ ಒತ್ತು ನೀಡಿದ್ದಾರೆ.

ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಮೂಲಭೂತ ಹಕ್ಕುಗಳನ್ನು ಕಾಯ್ದುಕೊಳ್ಳುವುದು ಎಷ್ಟು ಮುಖ್ಯವೋ, ಮೂಲಭೂತ ಕರ್ತವ್ಯಗಳಿಗೆ ತಕ್ಕಂತೆ ನಡೆದುಕೊಳ್ಳುವುದು ಅಷ್ಟೇ ಅವಶ್ಯಕವಾಗಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜನರ ಸಂಕಷ್ಟಗಳಿಗೆ ಭಾಗಿಯಾಗುವ ಸಮರ್ಥ ನಾಯಕರನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಕಾಣುತ್ತಿದ್ದೆವು. ರಾಷ್ಟ್ರಕ್ಕೆ ಬೇಕಾಗಿರುವುದು ರಾಷ್ಟ್ರ ನಾಯಕರು ಎಂಬ ಚಿಂತನೆ ಉಳ್ಳವರು. ಆಡಳಿತ ಎಂಬುದು ಭಟ್ಟಂಗಿಗಳನ್ನು ಕೂರಿಸಿಕೊಂಡು ನಡೆಸುವ ಆಡಳಿತವಾಗಬಾರದು ಎಂದು ಭ್ರಷ್ಟಾಚಾರದ ವಿರುದ್ದ ಚಾಟಿ ಬೀಸಿದರು.

ನಾಗರಿಕ ಸಮಾಜ ಕಟ್ಟುವಲ್ಲಿ ಯುವಜನತೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಕ್ಕಳಿಗೆ ಪೋಷಕರು ಆಸ್ತಿ-ಹಣ ಮಾಡುವ ಬದಲಾಗಿ ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿಸಬೇಕು, ಪ್ರತಿ ಮನೆಯಲ್ಲೂ ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿರುವ ಮಕ್ಕಳು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವಂತಾಗಬೇಕು. ಕಲ್ಯಾಣ ರಾಷ್ಟದ ಅಶೋತ್ತರಗಳ ಈಡೇರಿಕೆಗೆ ದೇಶದ ನಾಗರೀಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಕೇವಲ ಹಣ ಸಂಪಾದ‌ನೆಯೊಂದೇ ಬದುಕಿನ ಧ್ಯೇಯವಾಗಬಾರದು, ದೇಶದ ಸರ್ವತೋಮುಖ ಅಭಿವೃದ್ದಿಗೆ, ಏಳಿಗೆಗೆ ನಮ್ಮ ಪಾತ್ರವೇನು ಎಂಬುದನ್ನು ಅರಿತು ಜೀವನ ನಡೆಸಬೇಕು. ಶ್ರೀಸಾಮಾನ್ಯನ ಸಂಕಷ್ಟಕ್ಕೆ ಮಿಡಿಯುವ ಮನಸ್ಸುಳ್ಳರಾಗಬೇಕು‌. ಈ ಮೂಲಕ ನಾವು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯತೆ ಇದೆ ಎಂದು ನ್ಯಾಯಮೂರ್ತಿ ಎಚ್.ಪಿ ಸಂದೇಶ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವೇಶ್ವರಪುರ ಕಾನೂನು ಮಹಾವಿದ್ಯಾಲಯದ ಮುಖ್ಯಸ್ಥರಾದ ಬಿ.ಎನ್ ಲೋಕೇಶ್, ಪ್ರಾಚಾರ್ಯರಾದ ಡಾ. ಸುಧಾ ಜಿ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಸಂಜೀವೆಗೌಡ ಜಿ.ಎಸ್, ಡಾ.ಅರವಿಂದ್ ಹೆಚ್.ಟಿ ಡಾ. ಗಿರೀಶ್, ಪ್ರೊ. ಮನೋಹರ್ ಡಿ, ಲಕ್ಷ್ಮೀಶ್ ರಾವ್, ವಿಶ್ವಪ್ರಿಯಾ, ಯೋಗೆಂದ್ರ.ಎಸ್ ಮತ್ತಿತರರು ಉಪಸ್ಥಿತರಿದ್ದರು.


Share It

You cannot copy content of this page