ಲೇಖಕರು: ಎಸ್.ಎಚ್. ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ.
ಇತ್ತೀಚೆಗೆ ಕರ್ನಾಟಕದ ಗೃಹ ಸಚಿವರು, ಸಾರಾಸಗಟಾಗಿ ನಮ್ಮ ಪೋಲೀಸರನ್ನು ಭ್ರಷ್ಟರು ಮತ್ತು ಸೋಮಾರಿಗಳು ಎಂದು ಟೀಕಿಸಿ, ದೊಡ್ಡ ವಿವಾದ ಸೃಷ್ಟಿ ಮಾಡಿದ್ದಾರೆ.
ಒಟ್ಟಾರೆ ಇಂದು ಸರಕಾರಿ ವ್ಯವಸ್ಥೆ ಭ್ರಷ್ಟಚಾರದ ಸುಳಿಯಲ್ಲಿದೆ. ಇದೇನು ಸುಳ್ಳಲ್ಲ. ಇದು ಸರ್ವವಿಧಿತ. ಆದರೆ ಅಧಿಕಾರದಲ್ಲಿದ್ದು ಉತ್ತಮ ಆಡಳಿತ ಕೊಡುವ ಭರವಸೆ ನೀಡಿ, ಮಂತ್ರಿಯಾದವರು ತಮ್ಮ ಇಲಾಖೆಯನ್ನು ಜರಿದರೆ ಅದು ಹಾಸ್ಯಾಸ್ಪದ.
ಪೋಲಿಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಇಲ್ಲ ಅಥವಾ ಅದು ಬಹಳ ಪಾರದರ್ಶಕ ಇಲಾಖೆ ಅಂತ ಅದಕ್ಕೆ ಪ್ರಮಾಣಪತ್ರ ಯಾರು ನೀಡುವುದಿಲ್ಲ. ಆದರೆ ಸರಕಾರದ ಯಾವುದೇ ಇಲಾಖೆ ಇಂದು ಭ್ರಷ್ಟಾಚಾರ ಮುಕ್ತ ಇದೆ ಅಂತ ನಾವು ಯಾರೂ ಹೇಳಲು ಸಾಧ್ಯವಿಲ್ಲ. ಪರ್ಸಂಟೇಜ್ ವ್ಯವಹಾರದ ಆರೋಪ ಹೊತ್ತಿರುವ ಸರಕಾರದಲ್ಲಿ ಪಾರದರ್ಶಕತೆ ಬಗ್ಗೆ ನಿರೀಕ್ಷೆ ಮಾಡುವದು ಮೂರ್ಖತನ.
ಜನರಿಗೆ ಹಲವಾರು ಆಶ್ವಾಸನ ನೀಡಿ ಆರಿಸಿ ಬಂದ ಮೇಲೆ, ಜನರತ್ತ ಸುಳಿಯದ ರಾಜಕಾರಣಿ ಮಹಾ ಸಾಚಾ ಎಂದು ಕರೆಯಲಾಗದು. ಸರಕಾರದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟರು ಮತ್ತು ಸೋಮಾರಿಗಳು ತುಂಬಿದ್ದಾರೆ. ಇನ್ನೂ ಈ ಸಾಲಿಗೆ ಸೇರುವ ರಾಜಕಾರಣಿಗಳು ಕೂಡಾ ಇದ್ದಾರೆ. ಜನರಿಂದ ಆರಿಸಿ ಬಂದ ಮೇಲೆ ಅವರ ಮೇಲೆ ಏನೂ ಕ್ರಮ ಕೈಕೊಳ್ಳಲು ಮತದಾರ ಪ್ರಭುವಿಗೆ ಯಾವದೇ ಅಧಿಕಾರ ಇಲ್ಲ.
ಆದರೆ ಸೇವೆಯಲ್ಲಿ ನೇಮಕಗೊಂಡ ಯಾವದೇ ಶ್ರೇಣಿಯ ಅಧಿಕಾರಿಯನ್ನು ದುರ್ನಡತೆ ಮೇಲೆ ವಿಚಾರಣೆ ಮಾಡಬಹುದು. ಆದರೆ ಚುನಾಯಿತ ಪ್ರತಿನಿಧಿಗಳನ್ನು ಯಾರು ದುರ್ನಡತೆ ಮೇಲೆ ವಿಚಾರಣೆ ಮಾಡುವದು ಸುಲಭವಲ್ಲ. ಇದರಿಂದ ಭ್ರಷ್ಟ ಅಧಿಕಾರಿಗಳ ಮೇಲೆ ಇರುವ ಒಂದು ನಿಯಂತ್ರಣ ಚುನಾಯಿತ ಪ್ರತಿನಿಧಿಗಳ ಮೇಲೆ ಇಲ್ಲ.
ಇನ್ನು ಸರಕಾರದ ಭ್ರಷ್ಟಾಚಾರ, ಇದು ನೌಕರರು ಮತ್ತು ರಾಜಕಾರಣಿಗಳ ಜಂಟಿ ಸಹಕಾರದ ಒಂದು ಬ್ರಹತ್ ಜಾಲ. ಪರ್ಸಂಟೇಜ್ ವ್ಯವಹಾರದಲ್ಲಿ ನೌಕರರು ಮತ್ತು ರಾಜಕಾರಣಿಗಳ ಪಾಲು ಇರುವುದು. ಈ ಭ್ರಷ್ಟಾಚಾರದಲ್ಲಿ ಪರಸ್ಪರ ನಂಬಿಕೆ ಮಾತ್ರ ಗರಿಷ್ಠ ಮಟ್ಟದಲ್ಲಿ ಇರುತ್ತದೆ.
ತಮಗೆ ಬೇಕಾದ ಅಧಿಕಾರಿಗಳನ್ನು ಶಾಸಕರು ತಮ್ಮ ಕ್ಷೇತ್ರಕ್ಕೆ ವರ್ಗಾಯಿಸಿಕೊಂಡು, ತಮಗೆ ಬೇಕಾದ ಹಾಗೆ ಅವರನ್ನು ಬಳಸಿಕೊಳ್ಳುವುದು ಹೊಸದೇನಲ್ಲ. ಶಾಸನ ಪಾಲಿಸಬೇಕಾದ ಅಧಿಕಾರಿ ಶಾಸಕರನ್ನು ಪಾಲಿಸುತ್ತಾರೆ. ಇಂತಹ ಸಂದರ್ಭದಲ್ಲಿ ವರ್ಗಾವಣೆಗೊಂಡ ಅಧಿಕಾರಿ ಶಾಸನ ಪಾಲಿಸದೇ ಶಾಸಕರನ್ನು ಪಾಲಿಸಲು ಅಕ್ರಮ ಮಾಡುತ್ತಾರೆ. ಇದೆ ಭ್ರಷ್ಟಾಚಾರದ ಮೂಲ.
ನೌಕರರ ವರ್ಗಾವಣೆಗೆ ದುಡ್ಡು ಪಡೆಯುವ ರಾಜಕಾರಣಿಗಳಲ್ಲಿ, ನೌಕರರ ಭ್ರಷ್ಟಾಚಾರದ ಬಗ್ಗೆ ಟೀಕಿಸುವ ನೈತಿಕತೆ ಇರುವದಿಲ್ಲ. ರಾಜಕಾರಣಿ ಅಥವಾ ನೌಕರರ ಭ್ರಷ್ಟಾಚಾರದ ಸಮರ್ಥನೆ ಯಾವ ಕಾರಣಕ್ಕೂ ಮಾಡಲಾಗದು.
ಹಿಂದೆ ಕೆಲವು ಹೋರಾಟಗಾರರನ್ನು ಬಳ್ಳಾರಿ ಜೈಲಿನಿಂದ ಬಿಡಿಸಿಕೊಂಡು ಬರುವಾಗ ಲಂಚ ಸೇರಿ ಏನೆಲ್ಲ ತೊಂದರೆ ತಾವು ಅನುಭವಿಸಿದ್ದರು ಎನ್ನುವದನ್ನು ಮಾನ್ಯ ಗೃಹ ಸಚಿವರು, ಸಚಿವರಾದ ತಕ್ಷಣ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಗಮನಿಸಬಹುದು. ಮಾನ್ಯ ಗೃಹ ಸಚಿವರಿಗೆ ಪೋಲಿಸ್ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಸ್ವಂತ ಅನುಭವ ಇರುವದು ಕೂಡ ಪೋಲಿಸ್ ಬಗ್ಗೆ ಅವರ ಅಸಮಾಧಾನಕ್ಕೆ ಕಾರಣ ಇರಬಹುದು.
ಸರಕಾರದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಇರುವದು ಹೊಸದೇನಲ್ಲ. ಆದರೆ ಇವೇ ಇಲಾಖೆಗಳ ಮೂಲಕ ಸಚಿವರು, ಸರಕಾರದ ಯೋಜನೆಗಳನ್ನು ಜಾರಿ ಮಾಡಿ ರಾಜ್ಯದ ಅಭಿವೃದ್ದಿ ಮಾಡಬೇಕಾದ ಅನಿವಾರ್ಯತೆ ಇದೆ.
ಇಂದು ಅಪರಾಧ ನಡೆದರೆ ಇದೆ ಪೋಲಿಸ್ ಇಲಾಖೆಗೆ ದೂರು ನೀಡಬೇಕು. ಆರೋಗ್ಯ ಕೆಟ್ಟರೆ ಸರಕಾರಿ ಆಸ್ಪತ್ರೆಗೆ ಹೋಗಬೇಕು. ಎಲ್ಲ ಇಲಾಖೆಯಲ್ಲಿ ಇರುವಂತೆ ಈ ಎರಡೂ ಇಲಾಖೆಯಲ್ಲಿ ಭ್ರಷ್ಟಾಚಾರ ಇದ್ದೇ ಇದೆ.
ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ಇದೆ, ಆದರೆ ಎಲ್ಲ ಇಲಾಖೆಗಳಲ್ಲೂ ಕೆಲವರು ಪ್ರಾಮಾಣಿಕರು ಇದ್ದಾರೆ, ಆದರೆ ಅವರು ತೋಳಗಳ ಮಧ್ಯದ ಕುರಿಯಂತೆ ಅಪಾಯದ ಅಂಚಿನಲ್ಲಿರುವ ಪ್ರಾಣಿ ಸಂಕುಲದಂತೆ ಇದ್ದಾರೆ. ಎಲ್ಲ ಸಚಿವರು ತಮ್ಮ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಗೊತ್ತಿದ್ದರೂ ಮೌನ ವಹಿಸುತ್ತಾರೆ. ಯಾಕೆಂದರೆ ಭ್ರಷ್ಟಾಚಾರವನ್ನು ಒಟ್ಟಾಗಿ ಸಚಿವರು ಮತ್ತು ನೌಕರರು ತುಂಬಾ ಸಹಕಾರದಿಂದ ಸುಸೂತ್ರವಾಗಿ ನಡೆಸುತ್ತಾರೆ.
ನೌಕರನ್ನು ಲಂಚ ಪ್ರಕರಣಗಳಲ್ಲಿ ಸುಲಭವಾಗಿ ಸಿಕ್ಕಿಸಬಹುದು. ಆದರೆ ರಾಜಕಾರಣಿಗಳನ್ನು ಅಷ್ಟು ಸುಲಭವಾಗಿ ಸಿಕ್ಕಿಸಲು ಆಗದು. ಬಚ್ಚಲು ಮನೆ, ಕಕ್ಕಸು ನೀರಿನ ಕೊಳವೆ ವಗೈರೆ ಸ್ಥಳಗಳಲ್ಲಿ ಲಂಚ ಹಣ ಬಚ್ಚಿಡುವ ನೌಕರರು ಮತ್ತು ರಾಜಕಾರಣಿಗಳನ್ನು ನಾವು ನೋಡಿದ್ದೇವೆ. ನೌಕರರ ಅಕ್ರಮ ಸಂಪತ್ತಿನ ಪ್ರಕರಣಗಳು ಆಮೆ ವೇಗದಲ್ಲಿ ನಡೆದು ಯಾವುದೇ ಒಂದು ತಾರ್ಕಿಕ ಅಂತ್ಯ ಕಾಣಲು ದಶಕಗಳೇ ಸರಿಯುತ್ತವೆ.
ಆದರೆ ರಾಜಕಾರಣಿಗಳ ಅಕ್ರಮ ಸಂಪತ್ತಿನ ಪ್ರಕರಣಗಳು ಪ್ರಾಥಮಿಕ ಹಂತಗಳಲ್ಲಿಯೇ ಬಿದ್ದು ಹೋಗುತ್ತವೆ. ಇದಕ್ಕೆ ಕಾರಣ ಉದ್ದೇಶ ಪೂರ್ವಕ ದೋಷಪೂರಿತ ತನಿಖೆಗಳು ಕಾರಣ. ಈ ಕಾರಣ ಹಲವಾರು ರಾಜಕಾರಣಿಗಳ ಲಂಚದ ಪ್ರಕರಣಗಳು ಅಂತಿಮಘಟ್ಟ ತಲುಪುವ ಮೊದಲೇ ಅಂತ್ಯ ಕಂಡಿವೆ.
ಗೋ ಕಳ್ಳರನ್ನು ಹಿಡಿಯಲು ಪೊಲೀಸರು ವಿಫಲರಾದರು ಅಂತ ಅವರ ಮೇಲೆ ಮಾನ್ಯ ಗೃಹ ಸಚಿವರು ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದು ಉಚಿತವಲ್ಲ.
ಹಾಗೆ ನೋಡಿದರೆ ಇನ್ನೂ ಗಂಭೀರವಾದ ಅಪರಾಧಗಳನ್ನು ಅವರು ಬೇಕಾಬಿಟ್ಟಿ ತನಿಖೆ ಮಾಡಿದ್ದು ಅವರು ಗಮನಿಸಬೇಕು. ಆದರೆ ಪೋಲೀಸರನ್ನು ಬಯ್ಯುವ ಮೊದಲು ರಾಜಕಾರಣಿಗಳು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದನ್ನು ಮೊದಲು ನಿಲ್ಲಿಸಬೇಕು.
ಗೃಹ ಇಲಾಖೆ ಸರಕಾರದ ಒಂದು ಮಹತ್ವದ ಇಲಾಖೆ. ಕಾರಣ ಗೃಹ ಸಚಿವರು ಒಟ್ಟಾರೆ ಸಮಾಜದ ಹಿತದ ದೃಷ್ಟಿಯಿಂದ, ತಮ್ಮ ಇಲಾಖೆಯನ್ನು ಪಾರದರ್ಶಕ ಮಾಡಿ ಅದನ್ನು ನಿಯಂತ್ರಣ ದಲ್ಲಿಟ್ಟುಕೊಂಡು ಮಾದರಿಯಾಗಬೇಕು. ಮಾನ್ಯ ಸರ್ವೋಚ್ಚ ನ್ಯಾಯಾಲಯ ಪೋಲಿಸ್ ಇಲಾಖೆ ಸುಧಾರಣೆಗೆ ನೀಡಿದ, ಹಲವಾರು ತೀರ್ಪುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿ, ಇಲಾಖೆಯನ್ನು ಜನ ಸ್ನೇಹಿಯನ್ನಾಗಿ ಮಾಡುವದು ಇಂದಿನ ಅಗತ್ಯ. ಈ ದಿಶೆಯಲ್ಲಿ ಮಾನ್ಯ ಗೃಹ ಸಚಿವರು ಹೆಚ್ಚು ಗಮನ ಹರಿಸಿ ದರೆ ಅದು ಕ್ರಾಂತಿಕಾರಿ ಹೆಜ್ಜೆಯಾಗಬಹುದು.
