News

ಹತ್ತಿಪ್ಪತ್ತು ವರ್ಷವಾದರೂ ಇತ್ಯರ್ಥವಾಗದ ಪ್ರಕರಣಗಳು: ವಿಳಂಬಕ್ಕೆ ಹೈಕೋರ್ಟ್ ಬೇಸರ

Share It

ಬೆಂಗಳೂರು: ನ್ಯಾಯಾಲಯಗಳಲ್ಲಿ ಹತ್ತಿಪ್ಪತ್ತು ವರ್ಷಗಳಿಂದ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿರುವುದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಕೀಲರು ಸೇರಿದಂತೆ ಸಂಬಂಧಪಟ್ಟವರು ಅಗತ್ಯ ಸಹಕಾರ ನೀಡುವಂತೆ ತಾಕೀತು ಮಾಡಿದೆ.

ಇಂದು ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ. ಎಚ್.ಬಿ ಪ್ರಭಾಕರ್ ಶಾಸ್ತ್ರಿ ಅವರಿದ್ದ ಪೀಠ ಸುಧೀರ್ಘ ಕಾಲ ಪ್ರಕರಣಗಳು ಬಾಕಿ ಉಳಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ ನ್ಯಾಯಾಂಗದ ಘನತೆಗೆ ತಕ್ಕಂತೆ ನಾವು ಕೆಲಸ ಮಾಡಬೇಕಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ವಕೀಲರ ನಡವಳಿಕೆಗೆ ಬೇಸರ: 16 ವರ್ಷಗಳ ಕಾಲ ಬಾಕಿ ಇರುವ ಪ್ರಕರಣವೊಂದನ್ನು ಪೀಠ ವಿಚಾರಣೆಗೆ ಕೈಗೆತ್ತಿಕೊಂಡ ವೇಳೆ ಅರ್ಜಿದಾರರ ಪರ ವಕೀಲರು ಕಾರಣಗಳನ್ನು ನೀಡಿ ಪ್ರಕರಣ ಮುಂದೂಡುವಂತೆ ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಇದೇ ಕಾರಣ ನೀಡಿ ಈ ಹಿಂದೆಯೇ ಸುಮಾರು ಒಂದು ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದೀರಿ. ಮತ್ತೆ ಕಾಲಾವಕಾಶ ಬೇಕೆಂದರೆ ಪ್ರಕರಣ ಅನಗತ್ಯವಾಗಿ ವಿಳಂಬವಾಗುತ್ತದೆ. ಇದು ಸರಿಯಲ್ಲ ಎಂದು ಪೀಠ ಬೇಸರ ವ್ಯಕ್ತಪಡಿಸಿತು.

ಅಂತಿಮವಾಗಿ ಉಭಯ ವಕೀಲರ ಕೋರಿಕೆ ಮೇರೆಗೆ ಒಂದು ವಾರ ಕಾಲಾವಕಾಶ ನೀಡಿದರು.

ಕೋರ್ಟ್ ಸಿಬ್ಬಂದಿ ಕುರಿತು ಅಸಮಾಧಾನ: ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಖುದ್ದು ನಾನೇ ಬಾಕಿ ಇರುವ 5-6 ಸಾವಿರ ಪ್ರಕರಣಗಳನ್ನು ಲಿಸ್ಟ್ ಮಾಡಿಸಿದ್ದೇನೆ. ಪ್ರಕರಣಗಳ ಪಟ್ಟಿಯೇ ದೊಡ್ಡ ಪುಸ್ತಕವಾಗಿದೆ.

ಆದರೆ, ಕೋರ್ಟ್ ಕಚೇರಿಗಳಲ್ಲಿರುವ ಎಫ್.ಡಿ.ಎ, ಎಸ್.ಡಿ.ಎ ಗಳು ತಮಗೆ ತೋಚಿದಂತೆ ಪ್ರಕರಣಗಳನ್ನು ಲಿಸ್ಟ್ ಮಾಡುತ್ತಿದ್ದಾರೆ. ಇಲ್ಲಿ ಯಾರ ಪ್ರಭಾವ ನಡೆಯುತ್ತಿದೆಯೋ ತಿಳಿಯದು ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಈ ಬಗ್ಗೆ ಹೈಕೋರ್ಟ್ ರಿಜಿಸ್ಟ್ರಾರ್ ಗಳು ಗಮನ ಹರಿಸುವ ಅಗತ್ಯವಿದೆ ಎಂದರು.

ಬಾಕಿ ಪ್ರಕರಣಗಳು ಶೀಘ್ರ ಇತ್ಯರ್ಥವಾಗಬೇಕು: ನ್ಯಾಯಾಲಯಗಳಲ್ಲಿ ಹತ್ತಿಪ್ಪತ್ತು ವರ್ಷಗಳಿಂದ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇದರಿಂದ ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ಮೇಲಿನ ಒತ್ತಡ ಹೆಚ್ಚುತ್ತಿದೆ. ನಾವು ಕೂಡ ಹಾಗೇ ಕೆಲಸ ಮಾಡಿಕೊಂಡು ಹೋದರೆ ನಮಗೂ ಒತ್ತಡವಿರುವುದಿಲ್ಲ.

ಆದರೆ, ನ್ಯಾಯಾಲಯದ ಘನತೆ, ಸಾರ್ವಜನಿಕ ನಂಬಿಕೆ ಉಳಿಸಿಕೊಳ್ಳುವುದು ನಮಗೆ ಮುಖ್ಯ. ಅದಕ್ಕಾಗಿ ನಾವು ಹಳೆಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಮುತುವರ್ಜಿ ವಹಿಸಿದ್ದೇವೆ. ಈ ನಿಟ್ಟಿನಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ವಕೀಲರು, ಕೋರ್ಟ್ ಸಿಬ್ಬಂದಿ ಸೇರಿದಂತೆ ಎಲ್ಲರೂ ಅಗತ್ಯ ಸಹಕಾರ ನೀಡಬೇಕು ಎಂದರು.


Share It

You cannot copy content of this page