ಪತ್ನಿಗೆ ಉಡುಗೊರೆ ರೂಪದಲ್ಲಿ ಬಂದ ಆಭರಣಗಳು ಹಾಗೂ ವಸ್ತುಗಳು ಆಕೆಯ ವೈಯಕ್ತಿಕ ಆಸ್ತಿ. ಇವುಗಳನ್ನು ಆಕೆಯ ಒಪ್ಪಿಗೆ ಇಲ್ಲದೆ ಪತಿಯೂ ಸಹ ತೆಗೆದುಕೊಳ್ಳಲು ಬರುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹೆಂಡತಿಯ ಒಡವೆಗಳನ್ನು ಗಂಡ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ದಾಖಲಿಸಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ತೀರ್ಪು ನೀಡಿದೆ.
ನ್ಯಾಯಾಲಯ ತನ್ನ ತೀರ್ಪಿನಲ್ಲಿ, ವಿವಾಹದ ಸಂದರ್ಭದಲ್ಲಿ ಮಹಿಳೆಗೆ ನೀಡಲಾಗಿದ್ದ ಆಭರಣಗಳು, ವಸ್ತುಗಳು ಆಕೆಯ ವೈಯಕ್ತಿಕ ಆಸ್ತಿಯಾಗಿರುತ್ತವೆ. ಅವುಗಳನ್ನು ಆಕೆಯ ಪೂರ್ವಾನುಮತಿ ಇಲ್ಲದೆ ತೆಗೆದುಕೊಳ್ಳುವುದು ಅಥವಾ ತೆಗೆದುಕೊಳ್ಳಲು ಪ್ರಯತ್ನಿಸುವುದು ಅಪರಾಧವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಗಂಡನಾದರೂ ಸಹ ಪತ್ನಿಯ ಸಮ್ಮತಿ ಇಲ್ಲದೇ ಅಥವಾ ಆಕೆಗೆ ಮಾಹಿತಿ ನೀಡದೇ ಆಭರಣ ಮತ್ತು ವಸ್ತುಗಳನ್ನು ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಪ್ರಕರಣದಲ್ಲಿ ಪತಿ ಪತ್ನಿಯ ಆಭರಣಗಳನ್ನು ಕಳ್ಳತನ ಮಾಡಿದ ಆರೋಪವಿದೆ. ಪ್ರಕರಣ ತನಿಖಾ ಹಂತದಲ್ಲಿದ್ದು ಆರೋಪಿ ಪತಿಗೆ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ ಪತಿ-ಪತ್ನಿ ನಡುವೆ ಕಲಹವಿದ್ದು ಪತಿಗೆ ತೊಂದರೆ ನೀಡಲೆಂದೇ ಇಂತಹ ಸುಳ್ಳು ಆರೋಪವನ್ನು ಮಾಡಿ ದೂರು ದಾಖಲಿಸಲಾಗಿದೆ ಎಂಬ ಪತಿ ಪರ ವಕೀಲರ ವಾದವನ್ನು ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ. ಹಾಗೆಯೇ, ಆರೋಪಿಯನ್ನು ಪೊಲೀಸರು ಇನ್ನೂ ತನಿಖೆಗೆ ಒಳಪಡಿಸಿಲ್ಲ. ಈ ಹಂತದಲ್ಲಿ ಆರೋಪ ಸುಳ್ಳು ಎಂಬ ಅಂಶವನ್ನು ಪರಿಗಣಿಸಲಾಗದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ದೆಹಲಿಯ ಕೆ.ಎನ್ ಕಾಟ್ಜು ಮಾರ್ಗ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ತನ್ನ ಪತಿ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ತಾನು ತವರು ಮನೆಗೆ ಹೋಗಿದ್ದ ವೇಳೆ ಮನೆಯಲ್ಲಿ ಇರಿಸಿದ್ದ ಚಿನ್ನಾಭರಣ, ನಗದು, ಗೃಹೋಪಯೋಗಿ ವಸ್ತುಗಳನ್ನು ಪತಿ ಕದ್ದಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇದರಿಂದ ಬಂಧನದ ಭೀತಿಗೆ ಸಿಲುಕಿರುವ ಪತಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಪತಿಯ ಪರ ವಾದ ಮಂಡಿಸಿದ್ದ ವಕೀಲರು, ದಂಪತಿ ನಡುವೆ ವೈಮನಸ್ಯವಿದೆ. ಈ ಹಿನ್ನೆಲೆಯಲ್ಲಿ ಪತ್ನಿ ತವರು ಮನೆಗೆ ಹೋಗಿದ್ದರು. ಈ ನಡುವೆ ಬಾಡಿಗೆಗೆ ವಾಸವಿದ್ದ ಮನೆಯನ್ನು ಬದಲಿಸಿದ್ದು. ವಸ್ತುಗಳನ್ನು ಬೇರೆಡೆಗೆ ಸಾಗಿಸಲಾಗಿದೆ. ಇದರಿಂದ ಮತ್ತಷ್ಟು ಅಸಮಾಧಾನಗೊಂಡಿರುವ ಮಹಿಳೆ ಸುಳ್ಳು ಆರೋಪ ಮಾಡಿ ಗಂಡನ ವಿರುದ್ಧ ಇಂತಹ ದೂರು ದಾಖಲಿಸಿದ್ದಾರೆ ಎಂದು ವಾದಿಸಿದ್ದರು.