Law

24 ಬಾರಿ ಕೇಸ್ ಮುಂದೂಡಿದ ಎಸಿ ಕೋರ್ಟ್: ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ

Share It

ಕಂದಾಯ ವ್ಯಾಜ್ಯಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವ ಅರೆ ನ್ಯಾಯಿಕ ಪ್ರಾಧಿಕಾರಗಳಾದ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯಗಳ ಕಾರ್ಯವೈಖರಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಕಂದಾಯ ಕೋರ್ಟ್ ಗಳು ಕಲಾಪಗಳನ್ನು ಅನಗತ್ಯವಾಗಿ ಮುಂದೂಡದಂತೆ ತಾಕೀತು ಮಾಡಿರುವ ಹೈಕೋರ್ಟ್, ನಿಗದಿತ ದಿನದಂದೇ ಕಲಾಪ ನಡೆಸಲು ತಾಕೀತು ಮಾಡಿದೆ. ಅಲ್ಲದೇ, ಈ ಸಂಬಂಧ ಸುತ್ತೋಲೆ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಖಾತೆ ಬದಲಾವಣೆ ಸಂಬಂಧ ಸಲ್ಲಿಸಿರುವ ಮೇಲ್ಮನವಿಯನ್ನು ಕಳೆದ 5 ವರ್ಷಗಳಿಂದ ಮುಂದೂಡಿಕೊಂಡು ಬರುತ್ತಿರುವ ಉಪವಿಭಾಗಾಧಿಕಾರಿಗೆ ಪ್ರಕರಣವನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸಲು ನಿರ್ದೇಶಿಸಬೇಕು ಎಂದು ಕೋರಿ ಚಿಕ್ಕಬಳ್ಳಾಪುರದ ಸುಬ್ಬಾರೆಡ್ಡಿ ಎಂಬುವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಕಂದಾಯ ನ್ಯಾಯಾಲಯಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದೆ. ಕಂದಾಯ ನ್ಯಾಯಾಲಯಗಳು ಕಲಾಪಗಳನ್ನು ಅನಗತ್ಯವಾಗಿ ಮುಂದೂಡಬಾರದು. ಯಾವ ದಿನಾಂಕಕ್ಕೆ ಪ್ರಕರಣವನ್ನು ನಿಗದಿಪಡಿಸಲಾಗಿರುತ್ತದೆಯೋ ಅಂದೇ ವಿಚಾರಣೆ ನಡೆಸಬೇಕು. ಪ್ರಕರಣಗಳನ್ನು ಮಧ್ಯಾಹ್ನದ ಬದಲಿಗೆ ಬೆಳಗ್ಗೆ ಸಮಯದಲ್ಲೇ ವಿಚಾರಣೆ ನಡೆಸಬೇಕು. ಈ ಸಂಬಂಧ ಕಂದಾಯ ಇಲಾಖೆಯ ಅರೆ ನ್ಯಾಯಿಕ ಪ್ರಾಧಿಕಾರಗಳಾದ ರಾಜ್ಯದ ಎಲ್ಲ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ನಿರ್ದೇಶಿಸಿದೆ.

ಅಲ್ಲದೇ, ಕಂದಾಯ ಇಲಾಖೆ ನ್ಯಾಯಿಕ ಪ್ರಾಧಿಕಾರಗಳು ನಿಗದಿತ ದಿನಾಂಕದಂದು ವಿಚಾರಣೆ ನಡೆಸದಿದ್ದರೆ ಪಕ್ಷಗಾರರಿಗೆ ತೊಂದರೆಯಾಗುತ್ತದೆ. ಆದರೆ, ಬಹುತೇಕ ಪ್ರಾಧಿಕಾರಿಗಳು ಹಿರಿಯ ಅಧಿಕಾರಿಗಳೊಂದಿಗೆ ಸಭೆ ಅಥವಾ ಇನ್ನಾವುದೋ ಮೀಟಿಂಗ್ ಹೆಸರಲ್ಲಿ ಪ್ರಕರಣದ ವಿಚಾರಣೆ ನಡೆಸುವುದಿಲ್ಲ. ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಕೋಲಾರ ಸೇರಿದಂತೆ ಬೆಂಗಳೂರು ಸುತ್ತಲಿನ ಜಿಲ್ಲೆಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿದೆ ಎಂದಿರುವ ಪೀಠ, ರೆವಿನ್ಯೂ ಕೋರ್ಟ್ ಗಳ ವಿಚಾರಣಾ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ: ಚಿಕ್ಕಬಳ್ಳಾಪುರದ ಸುಬ್ಬಾರೆಡ್ಡಿ ಎಂಬುವರು ತಮ್ಮ ಜಮೀನನ್ನು ಸರ್ಕಾರಿ ಬೀಡು ಅರಣ್ಯ ಎಂದು ಘೋಷಿಸಿ ಪಹಣಿ ಬದಲಾಯಿಸಿರುವ ತಹಶೀಲ್ದಾರರ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿಯನ್ನು 24 ಬಾರಿ ವಿಚಾರಣೆಗೆ ನಿಗದಿಪಡಿಸಿದ್ದರೂ ಉಪವಿಭಾಗಾಧಿಕಾರಿ ವಿಚಾರಣೆ ನಡೆಸದೆ ಪ್ರಕರಣವನ್ನು ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹಾಗೆಯೇ, ತಮಗೆ 66 ವರ್ಷ ವಯಸ್ಸಾಗಿದ್ದು, ಕಚೇರಿಗೆ ಪದೇ ಪದೇ ಅಲೆದಾಡಲು ಸಾಧ್ಯವಿಲ್ಲ. ಹೀಗಾಗಿ ತ್ವರಿತವಾಗಿ ಅರ್ಜಿ ವಿಚಾರಣೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿದ್ದರು.

(WP 18143/2021)


Share It

You cannot copy content of this page