ತನ್ನನ್ನು ಪ್ರೀತಿಸದಿದ್ದರೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾದ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
14 ವರ್ಷದ ಅಪ್ರಾಪ್ತ ಬಾಲಕಿಗೆ ಪ್ರೀತಿಸುವಂತೆ ಒತ್ತಾಯಿಸಿದ ಹಾಗೂ ಪ್ರೀತಿಸದಿದ್ದರೆ ಆ್ಯಸಿಡ್ ಹಾಕುವ ಬೆದರಿಕೆ ಹಾಕಿದ ಆರೋಪ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಹಾಸನದ ಅರಸೀಕೆರೆ ತಾಲೂಕಿನ ಹೊಸಕಲ್ಲನಾಯಕನಹಳ್ಳಿ ಗ್ರಾಮದ ಪವನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ಜಿ ಉಮಾ ಅವರಿದ್ದ ಪೀಠ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. ಪೀಠ ತನ್ನ ತೀರ್ಪಿನಲ್ಲಿ, ಆರೋಪಿಗೆ ಜಾಮೀನು ನೀಡಿದರೆ ಸಂತ್ರಸ್ತ ಬಾಲಕಿಗೆ ಆಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಆರೋಪಿ ಯುವಕ ಸಂತ್ರಸ್ತ ಬಾಲಕಿ ಶಾಲೆಗೆ ಹೋಗುವ ಮತ್ತು ಬರುವ ಸಂದರ್ಭದಲ್ಲಿ ಆಕೆಯನ್ನು ತಡೆದು ನಿಲ್ಲಿಸಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಹಾಗೂ ತನ್ನ ಪ್ರೀತಿಯನ್ನು ಒಪ್ಪದದ್ದಿರೆ ಆ್ಯಸಿಡ್ ಎರಚುವ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಸಂತ್ರಸ್ತ ಬಾಲಕಿ ಆರೋಪಿಗೆ ಜಾಮೀನು ನೀಡದಂತೆ ಆಕ್ಷೇಪಣೆ ರವಾನಿಸಿದ್ದಾರೆ. ಹಾಗೆಯೇ, ಒಂದೇ ಗ್ರಾಮದಲ್ಲಿ ವಾಸಿಸುತ್ತಿರುವ ಆರೋಪಿಗೆ ಜಾಮೀನು ನೀಡಿದರೆ ತನಗೆ ಆ್ಯಸಿಡ್ ಎರಚುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದ್ದಾಳೆ.
ಆರೋಪಿಗೆ ಒಂದು ವೇಳೆ ಜಾಮೀನು ನೀಡಿ ಆತ ದಾಳಿ ಮಾಡಿದರೆ ಆ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಸಂತ್ರಸ್ತೆಯ ಆತಂಕ ಪರಿಗಣಿಸುವಂತದ್ದಾಗಿದೆ. ಹೀಗಾಗಿ ಆರೋಪಿಗೆ ಜಾಮೀನು ನೀಡಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: 26 ವರ್ಷದ ಪವನ್ ತನ್ನದೇ ಗ್ರಾಮದ 14 ವರ್ಷದ ಬಾಲಕಿಯನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದು, ಒಪ್ಪದಿದ್ದರೆ ಆ್ಯಸಿಡ್ ಎರಚುವ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಪವನ್ ವಿರುದ್ಧ ಐಪಿಸಿ ಸೆಕ್ಷನ್ 341, 354(ಡಿ), 506 ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 10, 12 ರ ಅಡಿ ಎಫ್ಐಆರ್ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಜೈಲು ಸೇರಿದ ಬಳಿಕ ಆರೋಪಿ ಪವನ್ ಜಾಮೀನು ಕೋರಿ ಹಾಸನದ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪವನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
(CRIMINAL PETITION NO. 9563 OF 2022)