News

ಸಂತ್ರಸ್ತ ಮಗುವಿಗೆ ಮಾನವೀಯತೆ ತೋರಿದ ಹೈಕೋರ್ಟ್ ನ್ಯಾಯಮೂರ್ತಿ

Share It

ಬೆಂಗಳೂರು: ಪೋಕ್ಸೊ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿದ್ದ ತಾಯಿ ಹಾಗೂ ಮಗುವಿನ ಯೋಗಕ್ಷೇಮ ವಿಚಾರಿಸಿ, ಸಂತ್ರಸ್ತ ಮಗುವಿಗೆ ನ್ಯಾಯಮೂರ್ತಿಗಳು ಬಿಸ್ಕೆಟ್ ಪ್ಯಾಕ್ ನೀಡಿ ಮಾನವೀಯತೆ ಮೆರೆದ ಅಪರೂಪದ ಘಟನೆ ಇಂದು ಹೈಕೋರ್ಟ್ ನಲ್ಲಿ ಕಂಡು ಬಂತು.

ಪೊಕ್ಸೋ ಪ್ರಕರಣವೊಂದರಲ್ಲಿ ವಿಧಿಸಿರುವ ಶಿಕ್ಷೆ ರದ್ದು ಕೋರಿ ಹಾಗೂ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿ ಆರೋಪಿತ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್ ಹೇಮಲೇಖಾ ಅವರಿದ್ದ ಪೀಠದಲ್ಲಿ ಈ ದೃಶ್ಯ ಕಂಡು ಬಂತು.

ಪ್ರಕರಣದ ವಿಚಾರಣೆ ವೇಳೆ ಸಂತ್ರಸ್ತೆ ಹಾಗೂ ಆಕೆಯ 2 ವರ್ಷದ ಮಗ ನ್ಯಾಯಾಲಯದಲ್ಲಿ ಹಾಜರಿದ್ದರು. ಈ ವೇಳೆ ಸಂತ್ರಸ್ತೆಯನ್ನು ಪೀಠದ ಮುಂಭಾಗಕ್ಕೆ ಕರೆಸಿಕೊಂಡ ನ್ಯಾಯಮೂರ್ತಿಗಳು ಆಕೆಯ ಸ್ಥಿತಿಗತಿ ಕುರಿತು ವಿಚಾರಿಸಿಕೊಂಡರು. ಬಳಿಕ ಸಂತ್ರಸ್ತೆಯ 2 ವರ್ಷದ ಮಗುವನ್ನು ಕೂಡ ಪೀಠದ ಮುಂದೆ ಕರೆಸಿ ಪ್ರೀತಿಯಿಂದ ಮಾತನಾಡಿಸಿ, ಮಗುವಿನ ಯೋಗಕ್ಷೇಮ ತಿಳಿದುಕೊಂಡರು.

ನಂತರ, ತಾಯಿ ಹಾಗೂ ಮಗುವಿನ ಸ್ಥಿತಿ ಕಂಡು ಮರುಗಿದ ನ್ಯಾಯಮೂರ್ತಿಗಳು ಮಗುವಿನ ಬಿಸ್ಕೆಟ್ ಪ್ಯಾಕ್ ನೀಡಿ ಸಂತೈಸಿದರು. ಸಂತ್ರಸ್ತ ಮಗುವಿಗೆ ಅಕ್ಕರೆ ತೋರಿದ ನ್ಯಾಯಮೂರ್ತಿಗಳ ನಡೆ ಕೋರ್ಟ್ ಹಾಲ್ ನಲ್ಲಿದ್ದವರನ್ನು ಮಂತ್ರಮುಗ್ದಗೊಳಿಸಿತು.

ನ್ಯಾಯಮೂರ್ತಿಗಳಿಗೆ ಧರ್ಮಸಂಕಟ: ನಂತರ ಪ್ರಕರಣದ ವಿಚಾರಣೆ ಮುಂದುವರೆಸಿದ ನ್ಯಾಯಮೂರ್ತಿಗಳು ಆರೋಪಿಯ ಮೊದಲ ಪತ್ನಿಯನ್ನು ಪ್ರಶ್ನಿಸಿ ನಿನ್ನ ಪತಿಯಿಂದ ಇಂತಹ ಅನ್ಯಾಯವಾಗಿದೆ. ಸಂತ್ರಸ್ತೆ ಮತ್ತು ಆಕೆಯ ಮಗುವಿಗೆ ಹೇಗೆ ಪರಿಹಾರ ಒದಗಿಸುವುದು ಎಂದು ಪ್ರಶ್ನಿಸಿದರು. ಆಕೆ, ತನ್ನ ಪತಿಯಿಂದ ತಪ್ಪಾಗಿದೆ ನಿಜ. ಇದೀಗ ಸಂತ್ರಸ್ತೆ ಮತ್ತು ಆಕೆಯ ಮಗುವಿನ ಭವಿಷ್ಯದ ದೃಷ್ಟಿಯಿಂದ ತನ್ನ ಪತಿ ಸಂತ್ರಸ್ತೆಯನ್ನು ಮದುವೆಯಾಗುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಹೊಂದಿಕೊಂಡು ಹೋಗುತ್ತೇವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ನಿಮ್ಮದು ಮಾತೃ ಹೃದಯ. ಅದಕ್ಕೆ ಒಪ್ಪಿಕೊಂಡುಬಿಟ್ಟಿರಿ. ಆದರೆ, ಮೊದಲ ಪತ್ನಿ ಇರುವ ವೇಳೆ ಎರಡನೇ ಮದುವೆಗೆ ನ್ಯಾಯಾಲಯ ಸಮ್ಮತಿಸುವುದಾದರೂ ಹೇಗೆ. ಕಾನೂನು ಇದಕ್ಕೆ ಅನುಮತಿಸುವುದಿಲ್ಲ. ಮಗುವಿನ ಭವಿಷ್ಯದ ದೃಷ್ಟಿಯಿಂದ ಆರೋಪಿ ಸಂತ್ರಸ್ತೆಯನ್ನು ವಿವಾಹವಾಗಬೇಕು ಎಂಬುದೇನೋ ಸರಿ. ಆದರೆ, ಎರಡನೇ ವಿವಾಹವನ್ನು ಕಾನೂನು ಸಮ್ಮತಿಸದು. ಸಂತ್ರಸ್ತೆ ಮತ್ತು ಮಗುವಿನ ಸ್ಥಿತಿ ನೋಡಿದರೆ ಸಂಕಟವಾಗುತ್ತದೆ ಎಂದು ನ್ಯಾಯಪೀಠ ಮರುಗಿತು.

ಅಲ್ಲದೇ, ಆರೋಪಿ ಅವಿವಾಹಿತನಾಗಿದ್ದರೆ ಮದುವೆಯಾಗುವ ಆಯ್ಕೆ ನೀಡಿ ಪ್ರಕರಣವನ್ನು ಇತ್ಯರ್ಥಗೊಳಿಸಬಹುದಿತ್ತು. ಆದರೆ, ಆರೋಪಿಗೆ ಈಗಾಗಲೇ ಮದುವೆಯಾಗಿ ಮೊದಲ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಂತ್ರಸ್ತೆ ಮತ್ತು ಮಗುವಿಗೆ ಕಾನೂನಾತ್ಮಕವಾಗಿ ಪರಿಹಾರ ಕಲ್ಪಿಸುವುದು ಹೇಗೆ ಎಂದು ಪ್ರಾಸಿಕ್ಯೂಷನ್ ಪರ ಹಾಜರಿದ್ದ ಹೆಚ್ಚುವರಿ ಎಸ್.ಪಿ.ಪಿ ಹಾಗೂ ಆರೋಪಿ ಪರ ವಕೀಲರಿಗೆ ಪ್ರಶ್ನಿಸಿದರು. ಬಳಿಕ, ಬರೀ ಕಾನೂನು ಪುಸ್ತಕಗಳಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕಲಾಗದು. ಸಾಮಾಜಿಕ ಮತ್ತು ಮಾನವೀಯ ನೆಲೆಗಟ್ಟಿನಲ್ಲೂ ಪರಿಹಾರ ಹುಡುಕಲು ಪ್ರಯತ್ನಿಸಬೇಕು ಎಂದರು. ಅಲ್ಲದೇ, ಈ ಕುರಿತಂತೆ ಮುಂದಿನ ವಿಚಾರಣೆ ವೇಳೆ ಸೂಕ್ತ ಮಾರ್ಗೋಪಾಯಗಳನ್ನು ಹುಡುಕಿ ತರುವಂತೆ ಉಭಯ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿದರು.

ಪ್ರಕರಣದ ಹಿನ್ನೆಲೆ: ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, 16 ವರ್ಷದ ಆಪ್ರಾಪ್ತೆಯನ್ನು ಗರ್ಭಿಣಿಯಾಗಿಸಿ ಗಂಡು ಮಗುವಿನ ಜನನಕ್ಕೆ ಕಾರಣನಾದ ಆರೋಪಿ ಸದ್ಯ ಅತ್ಯಾಚಾರ ಹಾಗೂ ಪೋಕ್ಸೊ ಅಪರಾಧಗಳ ಅಡಿ ಶಿಕ್ಷೆಗೆ ಗುರಿಯಾಗಿ ನ್ಯಾಯಾಂಗ ಬಂಧನಕ್ಕೆ ಸಿಲುಕಿದ್ದಾನೆ. ಇದೀಗ ಆರೋಪಿ ಸಂತ್ರಸ್ತೆಗೆ ಯಾವುದೇ ರೀತಿಯಲ್ಲೂ ಪರಿಹಾರ ನೀಡಲು ಸಿದ್ದನಿದ್ದು ತನಗೆ ವಿಧಿಸಿರುವ ಶಿಕ್ಷೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ.


Share It

You cannot copy content of this page