News

ದಲಿತ ಮಹಿಳೆ ಸೈಟು ಕಿತ್ತುಕೊಂಡ ಗ್ರಾ.ಪಂ: 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್

Share It

ಬೆಂಗಳೂರು: ಮ್ಯಾನ್ ಹೋಲ್ ಶುಚಿಗೊಳಿಸುವ ವೇಳೆ ಪತಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ನೀಡಿದ್ದ ಸೈಟನ್ನು ಗ್ರಾಮ ಪಂಚಾಯ್ತಿ ಕಿತ್ತುಕೊಂಡಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಗ್ರಾ.ಪಂ ಅಧಿಕಾರಿಗಳಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಮಹಿಳೆಗೆ ಮಂಜೂರು ಮಾಡಿದ್ದ ಸೈಟನ್ನು ಹಿಂಪಡೆದ ಕ್ರಮವನ್ನು ಕಟುವಾಗಿ ಟೀಕಿಸಿರುವ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ, ಮಹಿಳೆಗೆ ಕಟ್ಟಿರುವ ಮನೆ ಸಹಿತ ಸೈಟನ್ನು ನೀಡಬೇಕು ಹಾಗೂ ಮಹಿಳೆಗೆ ತೊಂದರೆ ನೀಡಿದ್ದಕ್ಕೆ ಗ್ರಾಮ ಪಂಚಾಯ್ತಿ ಮತ್ತು ಅಧಿಕಾರಿಗಳು 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.

ಇದೇ ವೇಳೆ, ಉಳ್ಳವರು ಮತ್ತು ಅಧಿಕಾರದಲ್ಲಿ ಇರುವವರು ಬಡವರ ಹಕ್ಕುಗಳನ್ನು ಕಸಿದುಕೊಳ್ಳುವುದನ್ನು ನಿಲ್ಲಿಸಲು ಇದು ಸೂಕ್ತ ಕಾಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: 2008 ರಲ್ಲಿ ನರಸಿಂಹಯ್ಯ ಎಂಬುವರನ್ನು ನಿಯಮ ಬಾಹಿರವಾಗಿ ಯಲಹಂಕದಲ್ಲಿ ಮ್ಯಾನ್ ಹೋಲ್ ಸ್ವಚ್ಖಗೊಳಿಸಲು ಇಳಿಸಲಾಗಿತ್ತು. ಈ ವೇಳೆ ನರಸಿಂಹಯ್ಯ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಆ ಬಳಿಕ ಹೈಕೋರ್ಟ್ ಆದೇಶದಂತೆ ದೊಡ್ಡಬೆಳವಂಗಲ ಗ್ರಾಮ ಪಂಚಾಯ್ತಿಯು 1200 ಚದರ ಅಡಿ ಸೈಟನ್ನು ಪರಿಹಾರ ರೂಪದಲ್ಲಿ ಪತ್ನಿ ನಾಗಮ್ಮಗೆ ಮಂಜೂರು ಮಾಡಿತ್ತು. ಇತ್ತೀಚೆಗೆ ಅದೇ ಜಾಗದಲ್ಲಿ ಗ್ರಾ.ಪಂ ನಾಡಕಚೇರಿ ಸ್ಥಾಪಿಸಲು ಮುಂದಾಗಿತ್ತು. ತನ್ನ ಸೈಟನ್ನು ಕಸಿದುಕೊಳ್ಳುವ ಗ್ರಾ.ಪಂ ನಡೆ ಪ್ರಶ್ನಿಸಿ ನಾಗಮ್ಮ ಹೈಕೋರ್ಟ್ ಮೊರೆ ಹೋಗಿದ್ದರು.

ಅಧಿಕಾರಿಗಳಿಗೆ ದಂಡ: ಗ್ರಾ.ಪಂ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಬೆಂಗಳೂರು ಜಲಮಂಡಳಿಯ ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ನರಸಿಂಹಯ್ಯ ಅವರನ್ನು ನೇಮಿಸಿಕೊಂಡಿದ್ದು ತಪ್ಪು. ಅವರ ಕುಟುಂಬಕ್ಕೆ ಪುನರ್ ವಸತಿ ಕಾಯ್ದೆ ಅಡಿ ಅಗತ್ಯ ಸೌಲಭ್ಯಗಳನ್ನು ಮತ್ತು ಆರ್ಥಿಕ ನೆರವನ್ನು ನೀಡಬೇಕಾದದ್ದು ಸರ್ಕಾರದ ಕರ್ತವ್ಯ ಎಂದಿದೆ.

ಅಲ್ಲದೇ, ಅರ್ಜಿದಾರ ಮಹಿಳೆಯನ್ನು ಅವರ ನಿವೇಶನದಿಂದ ಖಾಲಿ ಮಾಡಿಸಬಾರದು. ಅವರಿಗೆ ಮನೆ ಕಟ್ಟಿಕೊಳ್ಳಲು ಅಗತ್ಯ ಆರ್ಥಿಕ ನೆರವು ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೇ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಡಿಸಿ ಹಾಗೂ ಗ್ರಾ.ಪಂ.ನ ಪಿಡಿಓ ಸೇರಿ 50 ಸಾವಿರ ಹಾಗೂ ಗ್ರಾ.ಪಂ 50 ಸಾವಿರ ಹಣವನ್ನು ನಾಗಮ್ಮ ಅವರಿಗೆ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.


Share It

You cannot copy content of this page