News

1ರೂಪಾಯಿ ಚಿಲ್ಲರೆ ಕೊಡದ ಕಂಡಕ್ಟರ್: 3 ಸಾವಿರ ಪರಿಹಾರ ಕೊಡಿಸಿದ ಕೋರ್ಟ್

Share It

ಬೆಂಗಳೂರು: ಬಸ್ ನಲ್ಲಿ ಪ್ರಯಾಣಿಸುವ ವೇಳೆ 1 ರೂಪಾಯಿ ಚಿಲ್ಲರೆ ನೀಡದ ಕಂಡಕ್ಟರ್ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್ ನೊಂದ ಪ್ರಯಾಣಿಕನಿಗೆ 3 ಸಾವಿರ ರೂಪಾಯಿ ಪರಿಹಾರ ಕೊಡುವಂತೆ ಆದೇಶಿಸಿದೆ.

ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಕಂಡಕ್ಟರ್ ತನಗೆ 1 ರೂಪಾಯಿ ಚಿಲ್ಲರೆ ವಾಪಸ್ ನೀಡಿಲ್ಲ ಎಂದು ಆಕ್ಷೇಪಿಸಿ ವಕೀಲ ರಮೇಶ್ ನಾಯಕ್ ಗ್ರಾಹಕ ಕೋರ್ಟ್ ಗೆ ದೂರು ಸಲ್ಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ಬೆಂಗಳೂರಿನ 4ನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದೂರುದಾರರಿಗೆ ತೊಂದರೆಯಾಗಿದ್ದಕ್ಕೆ 2 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಹಾಗೆಯೇ, ಕೇಸ್ ವೆಚ್ಚವಾಗಿ 1 ಸಾವಿರ ರೂಪಾಯಿ ಪಾವತಿಸುವಂತೆ ತಿಳಿಸಿದೆ.

ದಂಡದ ಮೊತ್ತವನ್ನು 45 ದಿನಗಳಲ್ಲಿ ನೀಡಬೇಕು ಇಲ್ಲದಿದ್ದರೆ ವಾರ್ಷಿಕ ಶೇಕಡಾ 6 ರಂತೆ ಬಡ್ಡಿ ಅನ್ವಯವಾಗಲಿದೆ ಎಂದು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2019ರ ಸೆಪ್ಟೆಂಬರ್ ನಲ್ಲಿ ದೂರುದಾರರಾದ ವಕೀಲ ರಮೇಶ್ ನಾಯಕ್ ಬಿಎಂಟಿಸಿ ವೋಲ್ವೊ ಬಸ್ ನಲ್ಲಿ ಶಾಂತಿನಗರದಿಂದ ಮೆಜೆಸ್ಟಿಕ್ ಗೆ ಪ್ರಯಾಣಿಸಿದ್ದರು. ಈ ವೇಳೆ 29 ರೂಪಾಯಿ ಟಿಕೆಟ್ ಗೆ 30 ರೂಪಾಯಿ ಪಡೆದಿದ್ದ ಕಂಡಕ್ಟರ್ 1 ರೂಪಾಯಿ ಚಿಲ್ಲರೆ ಹಿಂದಿರುಗಿಸಿರಲಿಲ್ಲ.

ಕಂಡಕ್ಟರ್ ಚಿಲ್ಲರೆ ನೀಡದ ಕ್ರಮ ಪ್ರಶ್ನಿಸಿ ನಾಯಕ್ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿ 15 ಸಾವಿರ ಪರಿಹಾರ ಕೋರಿದ್ದರು. ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ್ದ ಬಿಎಂಟಿಸಿ ಇದೊಂದು ಚಿಲ್ಲರೆ/ಕ್ಷುಲ್ಲಕ ಪ್ರಕರಣವಾಗಿದ್ದು ವಜಾಗೊಳಿಸಬೇಕು ಎಂದಿತ್ತು.

ವಾದ ಪ್ರತಿವಾದ ಆಲಿಸಿದ ಗ್ರಾಹಕ ನ್ಯಾಯಾಲಯ ವ್ಯಾಜ್ಯ ಕ್ಷುಲ್ಲಕ ಎನ್ನಿಸಬಹುದು. ಆದರೆ ಇದು ಗ್ರಾಹಕರ ಹಕ್ಕಿನ ವಿಚಾರ. ಅರ್ಜಿದಾರರ ಪ್ರಯತ್ನ ಮೆಚ್ಚುವಂತದ್ದು. ಹೀಗಾಗಿ ದೂರುದಾರರು ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂದು ಅಭಿಪ್ರಾಯಪಟ್ಟು ಪರಿಹಾರ ಪಾವತಿಸುವಂತೆ ಆದೇಶಿಸಿದೆ.


Share It

You cannot copy content of this page