ವಕೀಲರಾಗಿ ನೋಂದಾಯಿಸಿಕೊಂಡ 2 ವರ್ಷಗಳ ನಂತರವೂ ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಪಾಸು ಮಾಡದೆ, ವಕೀಲ ವೃತ್ತಿಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) ಎಚ್ಚರಿಸಿದೆ.
ಈ ಕುರಿತಂತೆ ರಾಜ್ಯದ ಎಲ್ಲಾ ವಕೀಲರ ಸಂಘಗಳಿಗೆ ಪತ್ರ ಬರೆದಿರುವ ಕೆಎಸ್‌ಬಿಸಿ, 2010 ರ ಜುಲೈ 14ರ ಬಳಿಕ ವಕೀಲರ ಪರಿಷತ್ತಿನಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿರುವವರು 2 ವರ್ಷಗಳಲ್ಲಿ ಅಖಿಲ ಭಾರತ ವಕೀಲರ ಪರೀಕ್ಷೆ ಪಾಸಾಗಿರಬೇಕು. ಇಲ್ಲವಾದರೆ ಅಂತಹವರು ವಕೀಲಿಕೆ ನಡೆಸುವಂತಿಲ್ಲ. ನ್ಯಾಯಾಲಯಗಳ ಮುಂದೆ ವಕೀಲರ ಸಮವಸ್ತ್ರ ಧರಿಸಿ ಹಾಜರಾಗುವಂತಿಲ್ಲ ಹಾಗು ವಕಾಲತ್ತು ಸಲ್ಲಿಸುವಂತಿಲ್ಲ. ಹೀಗಿದ್ದೂ ಕೆಲವರು ನಿಯಮ ಮೀರಿ ವರ್ತಿಸುತ್ತಿರುವುದು ಕೆಎಸ್‌ಬಿಸಿ ಗಮನಕ್ಕೆ ಬಂದಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂಥ ವಕೀಲರ ಸನ್ನದು (ಲೈಸೆನ್ಸ್) ಅಮಾನತು ಮಾಡಲಾಗುವುದು ಎಂದು ಕೆಎಸ್‌ಬಿಸಿ ಹೇಳಿದೆ.
ಅಲ್ಲದೇ, ಅಖಿಲ ಭಾರತ ವಕೀಲರ ಪರೀಕ್ಷೆ ಪೂರ್ಣಗೊಳಿಸದೇ ವಕಾಲತ್ತು ಹಾಕಿದ್ದ ಯಲಬುರ್ಗಾದ ವಕೀಲ ಆನಂದ್ ಎ. ಉಳ್ಳಾಗಡ್ಡಿ ಅವರ ಲೈಸೆನ್ಸ್ ನ್ನು ಈಗಾಗಲೇ ಕೆಎಸ್‌ಬಿಸಿ ಅಮಾನತುಗೊಳಿಸಿದೆ ಎಂದು ಪರಿಷತ್ತು ಪತ್ರದಲ್ಲಿ ತಿಳಿಸಿದೆ.
ಸದಸ್ಯತ್ವ ಕೊಡದಂತೆ ಮನವಿ: ಇನ್ನು ಎಐಬಿಇ ಪರೀಕ್ಷೆ ಪಾಸು ಮಾಡದ ಹಾಗೂ ಪ್ರಾಕ್ಟೀಸ್ ಪ್ರಮಾಣಪತ್ರ (ಸಿಒಪಿ) ಪಡೆಯದ ವಕೀಲರಿಗೆ ರಾಜ್ಯದ ಯಾವುದೇ ವಕೀಲರ ಸಂಘ ಸದಸ್ಯತ್ವ ನೀಡಬಾರದು ಹಾಗೂ ಎಐಬಿಇ ಪಾಸಗದೇ ಪ್ರಾಕ್ಟೀಸ್ ಮಾಡುತ್ತಿದ್ದರೆ ಅದನ್ನು ಕೆಎಸ್‌ಬಿಸಿಗೆ ಸೂಕ್ತ ದಾಖಲೆಗಳೊಂದಿಗೆ ತಿಳಿಸಬೇಕು ಎಂದು ಕೆಎಸ್‌ಬಿಸಿ ರಾಜ್ಯದ ಎಲ್ಲಾ ವಕೀಲರ ಸಂಘಗಳಿಗೆ ಮನವಿ ಮಾಡಿದೆ. ಒಂದು ವೇಳೆ ಇಂತಹ ವಕೀಲರ ಕುರಿತು ಮಾಹಿತಿ ನೀಡಿದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕೆಎಸ್‌ಬಿಸಿ ಪತ್ರದಲ್ಲಿ ಸ್ಪಷ್ಟಪಡಿಸಿದೆ.
2 ವರ್ಷ ಕಾಲಾವಕಾಶ: 2010ರ ಜುಲೈ 14ರ ನಂತರ ಕಾನೂನು ಪದವಿ ಪಡೆದಿರುವ ವಕೀಲರು ಭಾರತೀಯ ವಕೀಲರ ಪರಿಷತ್ (ಬಿಸಿಐ) ನಡೆಸುವ ಎಐಬಿಇ ಪರೀಕ್ಷೆ ಪಾಸು ಮಾಡುವುದು ಕಡ್ಡಾಯ. ವಕೀಲರಾಗಿ ನೋಂದಾಯಿಸಿಕೊಂಡ 2 ವರ್ಷಗಳಲ್ಲಿ ಎಐಬಿಇ ಪರೀಕ್ಷೆ ಉತ್ತೀರ್ಣರಾಗದಿದ್ದಲ್ಲಿ ವಕೀಲ ವೃತ್ತಿ ನಡೆಸುವಂತಿಲ್ಲ.
