ಬೆಂಗಳೂರು: ಭಾರತೀಯ ರೈಲ್ವೆ ನಿಯಮಗಳ ಪ್ರಕಾರ ಒಬ್ಬ ಅಥವಾ ಹೆಚ್ಚಿನ ಪತ್ನಿಯರು ಕುಟುಂಬ ಪಿಂಚಣಿ ಪಡೆಯಲು ಅರ್ಹರು. ಮೃತ ಉದ್ಯೋಗಿಯ ಎರಡನೇ ಪತ್ನಿಯೂ ಪಿಂಚಣಿಗೆ ಅರ್ಹರು, ಕುಟುಂಬ ಪಿಂಚಣಿಯು ಇಬ್ಬರು ಪತ್ನಿಯರ ನಡುವೆ ಸಮಾನವಾಗಿ ಹಂಚಿಕೆಯಾಗಲಿದೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಾವನ್ನಪ್ಪಿದ ರೈಲ್ವೆ ಉದ್ಯೋಗಿಯ ಎರಡನೇ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.
“ಉದ್ಯೋಗಿಯ ಹಕ್ಕುಗಳು ಅಥವಾ ಅವರ ಕುಟುಂಬವು ಪಿಂಚಣಿ ನಿಯಮ ಅವಲಂಬಿಸಿರುತ್ತದೆ. ನಿಯಮಗಳು ಇಲ್ಲದಿದ್ದರೆ ಪಿಂಚಣಿ ಇಲ್ಲ. ಒಂದು ವೇಳೆ ನಿಯಮಗಳಿದ್ದರೆ ಪಿಂಚಣಿಯನ್ನು ನಿಯಮದ ಪ್ರಕಾರ ಪಾವತಿಸಬೇಕು,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ರೈಲು ಸೇವೆಗಳ (ಪಿಂಚಣಿ) ನಿಯಮಗಳು 1993ಕ್ಕೆ 2016ರಲ್ಲಿ ತಿದ್ದುಪಡಿ ಮಾಡಿ ರೈಲು ಸೇವೆಗಳ (ಪಿಂಚಣಿ) ತಿದ್ದುಪಡಿ ನಿಯಮ ಜಾರಿಗೊಳಿಸಲಾಗಿದೆ. ಒಬ್ಬರು ಅಥವಾ ಹೆಚ್ಚು ವಿಧವೆಯರು ಕುಟುಂಬ ಪಿಂಚಣಿ ಪಡೆಯಲು ನಿಯಮದಲ್ಲಿ ಸ್ಪಷ್ಟವಾಗಿ ಹಕ್ಕು ಕಲ್ಪಿಸಲಾಗಿದೆ.
ಮೃತಪಟ್ಟ ಉದ್ಯೋಗಿಯ ವಿಧವಾ ಪತ್ನಿಯರಿಗೆ ಪಿಂಚಣಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ. ರೈಲ್ವೆ ಉದ್ಯೋಗಿಗೆ ಒಬ್ಬರಿಗಿಂತ ಹೆಚ್ಚು ಪತ್ನಿಯರಿದ್ದಾಗ ಇದು ಅನ್ವಯಿಸುತ್ತದೆ. ಸಂವಿಧಾನದ ಉದ್ದೇಶಕ್ಕೆ ಪೂರಕವಾಗಿ ನಿಯಮಗಳಿವೆ,” ಎಂದು ಆದೇಶದಲ್ಲಿ ವಿವರಿಸಲಾಗಿದೆ.
