News

ಮನೆಗೆಲಸಕ್ಕೆ ಪೊಲೀಸರ ಬಳಕೆ: ಆರ್ಡರ್ಲಿ ರದ್ದುಪಡಿಸಲು ಹೈಕೋರ್ಟ್ ಆದೇಶ

Share It

ಪೊಲೀಸ್ ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳ ಮನೆ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ (ಆರ್ಡರ್ಲಿ ವ್ಯವಸ್ಥೆ) ಕುರಿತಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್, ಕೂಡಲೇ ಈ ಕೆಟ್ಟ ಪದ್ದತಿಯನ್ನು ಸಂಪೂರ್ಣವಾಗಿ ರದ್ದುಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದೆ.

ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ವ್ಯವಸ್ಥೆ ಮುಂದುವರೆಸುತ್ತಿರುವ ಕ್ರಮ ಪ್ರಶ್ನಿಸಿ ಮಾಣಿಕವೇಲ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎಮ್ ಸುಬ್ರಮಣಿಯಮ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಉನ್ನತ ಪೊಲೀಸ್ ಅಧಿಕಾರಿಗಳ ಮನೆ ಕೆಲಸಗಳಿಗೆ ಪೊಲೀಸರನ್ನು ಬಳಸಿಕೊಳ್ಳುವ ಆರ್ಡರ್ಲಿ ಪದ್ದತಿ ವಸಾಹತುಶಾಹಿ ಗುಲಾಮಗಿರಿ ವ್ಯವಸ್ಥೆಯಾಗಿದ್ದು, ಇದನ್ನು ತಕ್ಷಣವೇ ತೊಲಗಿಸಬೇಕು. 1979ರಲ್ಲಿಯೇ ರಾಜ್ಯ ಸರ್ಕಾರ ಆರ್ಡರ್ಲಿ ವ್ಯವಸ್ಥೆ ರದ್ದುಪಡಿಸಿದೆ. ಹಾಗಿದ್ದೂ, ಹಿರಿಯ ಶ್ರೇಣಿಯ ಅಧಿಕಾರಿಗಳ ಮನೆಗಳಲ್ಲಿ ಪೊಲೀಸರನ್ನು ಕೀಳು ಕೆಲಸಗಳಿಗೆ ತೊಡಗಿಸುತ್ತಿರುವುದು ಪ್ರಜಾಪ್ರಭುತ್ವದ ಅಣಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ವಸಾಹತುಶಾಹಿ ವ್ಯವಸ್ಥೆಯನ್ನು ಮುಂದುವರೆಸಿರುವುದು ನಾಚಿಕೆಗೇಡಿನ ಸಂಗತಿ. ಜನರ ತೆರಿಗೆ ಹಣದಿಂದ ತರಬೇತಿ ಪಡೆದ ಪೊಲೀಸರನ್ನು ಹಿರಿಯ ಅಧಿಕಾರಿಗಳ ಮನೆಕೆಲಸಗಳಿಗೆ ಬಳಸುವುದು ಅತ್ಯಂತ ನೋವಿನ ಸಂಗತಿ. ಇಂತಹ ಅಧಿಕಾರಿಗಳ ಮನಸ್ಥಿತಿಯನ್ನು ಪ್ರಶ್ನಿಸುವ ಹಕ್ಕು ಜನರಿಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ನಮ್ಮ ಸಂವಿಧಾನವು ಸರ್ಕಾರಿ ನೌಕರ ಅಥವಾ ಸಾರ್ವಜನಿಕ ಸೇವಕರಾದವರು ದೇಶದ ಜನರಿಗೆ ಸೇವೆ ಸಲ್ಲಿಸಿ ಎಂದು ಹೇಳುತ್ತದೆಯೇ ಹೊರತು ಹಿರಿಯ ಅಧಿಕಾರಿಗಳ ಮನೆಕೆಲಸವನ್ನಲ್ಲ. ಆದ್ದರಿಂದ ಹಿರಿಯ ಅಧಿಕಾರಿಗಳ ಮನೆಗೆಲಸಕ್ಕೆ ಪೊಲೀಸ್ ಸಿಬ್ಬಂದಿಯನ್ನು ಬಳಸುವುದನ್ನು ಕೂಡಲೇ ರದ್ದುಮಾಡಬೇಕು ಎಂದು ಹೈಕೋರ್ಟ್ ತಮಿಳುನಾಡು ಡಿಜಿಪಿಗೆ ಆದೇಶಿಸಿದೆ.


Share It

You cannot copy content of this page