ಅನುದಾನ ರಹಿತ ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಪ್ರತಿ ವರ್ಷವೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರತಿವರ್ಷ ಅರ್ಜಿ ಸಲ್ಲಿಸುವಂತೆ ಸರ್ಕಾರ ಬಲವಂತಪಡಿಸುತ್ತಿದೆ ಎಂದು ಆಕ್ಷೇಪಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಹಾಗೂ ರಾಜ್ಯದ ಇತರೆ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ. ಕೃಷ್ಣ ಭಟ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಕರ್ನಾಟಕ ಶಿಕ್ಷಣ ಕಾಯ್ದೆ-1983ರ ನಿಯಮ 36ರ ಪ್ರಕಾರ ಮಾನ್ಯತೆ ಅವಧಿ ಮುಗಿದ ನಂತರವೇ ಮಾನ್ಯತೆ ನವೀಕರಣ ಕೋರಿ ಅರ್ಜಿ ಸಲ್ಲಿಸಬೇಕಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನೋಂದಣಿ) ನಿಯಮಗಳು-1999 ರ ನಿಯಮ 4(3) ಅಡಿಯಲ್ಲಿ ಪಡೆದ ಮಾನ್ಯತೆಯು 10 ವರ್ಷಗ ಕಾಲ ಇರಲಿದ್ದು, ನವೀಕರಣವೂ 10 ವರ್ಷಗಳ ಅವಧಿಗೆ ಇರಲಿದೆ ಎಂದು ಸ್ಪಷ್ಟಪಡಿಸಿದೆ.
ಅಲ್ಲದೇ, ಸರ್ಕಾರ ಅರ್ಜಿದಾರ ಶಿಕ್ಷಣ ಸಂಸ್ಥೆಗಳ ಆರೋಪಗಳನ್ನು ಅಲ್ಲಗಳೆದಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಕುರಿತಂತೆ ಮಾತ್ರವೇ ಇಂತಹ ಸುತ್ತೋಲೆ ಹೊರಡಿಸಿರುವುದಾಗಿ ತಿಳಿಸಿದೆ. ಮಾನ್ಯತೆ ಅವಧಿ ಕುರಿತಂತೆ ಯಾವುದೇ ವಿವಾದವಿಲ್ಲ ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರು ಸರ್ಕಾರದ ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದಿದೆ. ಹೀಗಾಗಿ, ಅರ್ಜಿಯಲ್ಲಿ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದೆ.
ಇದೇ ವೇಳೆ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಅಗ್ನಿ ಸುರಕ್ಷತಾ ಮಾನದಂಡಗಳು ಹಾಗೂ ಸುಸಜ್ಜಿತ ಕಟ್ಟಡ ನಿರ್ವಹಣೆ ಕುರಿತಂತೆ ಸುಪ್ರೀಂ ಕೋರ್ಟ್ ಅವಿನಾಶ್ ಮೆಹ್ರೋತ್ರಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಅಂಡ್ ಅದರ್ಸ್ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸುವಲ್ಲಿ ಗಮನ ಹರಿಸಬೇಕು ಎಂದು ಸೂಚಿಸಿದೆ
ಅರ್ಜಿದಾರರ ಆಕ್ಷೇಪವೇನಿತ್ತು: ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ 10 ವರ್ಷಗಳಿಗೊಮ್ಮೆ ಶಾಲಾ ಮಾನ್ಯತೆ ನವೀಕರಿಸಬೇಕಿದೆ. ಆದರೆ, ರಾಜ್ಯ ಸರ್ಕಾರ ಪ್ರತಿ ವರ್ಷವೂ ಮಾನ್ಯತೆ ನವೀಕರಿಸಿಕೊಳ್ಳುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಬಲವಂತಪಡಿಸುತ್ತಿದೆ. ಈ ಸಂಬಂಧ 2021ರ ಡಿ.12ರಂದು ಸುತೋಲೆ ಹೊರಡಿಸಿ, 2022ರ ಆಗಸ್ಟ್ 31ರೊಳಗೆ ಶಾಲಾ ಮಾನ್ಯತೆ ನವೀಕರಿಸಿಕೊಳ್ಳುವಂತೆ ಸೂಚಿಸಿದೆ. ಆದ್ದರಿಂದ, ಶಿಕ್ಷಣ ಕಾಯ್ದೆಯ ನಿಯಮಗಳ ಪ್ರಕಾರ 10 ವರ್ಷಕ್ಕೊಮ್ಮೆ ಮಾತ್ರವೇ ಶಾಲಾ ಮಾನ್ಯತೆ ನವೀಕರಿಸುವುದನ್ನು ಪಾಲಿಸುವಂತೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
(WP NO. 2664/2022)