ಲೇಖಕರು: ಸಂಗಯ್ಯ ಎಂ. ಹಿರೇಮಠ, ವಕೀಲರು, ಫೋ: 8880722220
ಭಾರತದಲ್ಲಿ ಪ್ರತಿಯೊಬ್ಬ ಮಹಿಳೆಯು ಆಸ್ತಿಗೆ ಸಂಬಂಧಿಸಿದಂತೆ ಹಲವು ಹಕ್ಕುಗಳನ್ನು ಹೊಂದಿದ್ದಾಳೆ. ಹಿಂದೂ ಉತ್ತರಾಧಿಕಾರದ ಕಾಯ್ದೆ 2005ರ ತಿದ್ದುಪಡಿಯ ಪ್ರಕಾರ ಮಹಿಳೆಯರಿಗೆ ತಮ್ಮ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕನ್ನು ನೀಡಲಾಗಿದೆ.
ತೆರಿಗೆ ವಿಷಯದಲ್ಲಾಗಲಿ ಅಥವಾ ಆನುವಂಶಿಕತೆಯ ಕಾನೂನು ಸಮಸ್ಯೆಯಲ್ಲಾಗಲಿ ಮಹಿಳೆಯರ ಹಕ್ಕನ್ನು ರಕ್ಷಿಸಿರುವುದಲ್ಲದೇ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡಿದೆ. ಹಿಂದೂ ಉತ್ತರಾಧಿಕಾರದ ಕಾಯ್ದೆ 2005ರ ತಿದ್ದುಪಡಿಯೊಂದಿಗೆ ಮಹಿಳೆಯರಿಗೆ ತಮ್ಮ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕನ್ನು ನೀಡಲಾಗಿದೆ. ಕಾಯಿದೆಯ ಪರಿಷ್ಕರಣೆಯ ನಂತರ ಲಿಂಗ ತಾರತಮ್ಯವನ್ನು ತೆಗೆದುಹಾಕಲಾಗಿದೆ.
ಭಾರತದ ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ, ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಸರ್ಕಾರ ನೀಡುವ ಜಮೀನುಗಳನ್ನು ಮಹಿಳೆಯರ ಹೆಸರಲ್ಲಿಯೇ ನೀಡಲಾಗುತ್ತದೆ. ಭಾರತದಲ್ಲಿ ಧಾರ್ಮಿಕ ಅಂಗಸಂಸ್ಥೆಯ ಆಧಾರದ ಮೇಲೆಯೇ ಕುಟುಂಬ ಕಾನೂನುಗಳು ವೈಯಕ್ತಿಕ ಸ್ಥಿತಿ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ. ಕೆಲವು ರಾಜ್ಯಗಳಲ್ಲಿ ಇದು ಜಾರಿಯಲ್ಲಿದ್ದರೆ, ಇನ್ನೂ ಕೆಲವು ರಾಜ್ಯಗಳು ಧಾರ್ಮಿಕ ಆಚರಣೆಗಳ ಆಧಾರದ ಮೇಲೆ ಕೊಂಚ ಬದಲಾವಣೆಯನ್ನು ಮಾಡಿಕೊಂಡಿವೆ.
ವಿವಾಹಿತ ಮಹಿಳೆ ಆಸ್ತಿ ಹಕ್ಕು: ವಿವಾಹಿತ ಮಹಿಳೆ ಗಳಿಸಿದ, ಉಡುಗೊರೆಯಾಗಿ ಪಡೆದ ಮತ್ತು ವಿಲ್ ಮೂಲಕ ಗಳಿಸಿದ ಆಸ್ತಿಗಳಿಗೆ ಆಕೆ ಒಬ್ಬಳೇ ಏಕಸ್ವಾಮ್ಯ ಹಕ್ಕನ್ನು ಪಡೆದುಕೊಂಡಿರುತ್ತಾಳೆ. 2005ರ ನಂತರದ ತಿದ್ದು ಪಡಿಯ ಕಾನೂನು ಪ್ರಕಾರ ತಂದೆಯ ನಿಧನದ ಬಳಿಕ ಮಹಿಳೆಯರಿಗೆ ತನ್ನ ತಂದೆಯ ಆಸ್ತಿಯಲ್ಲಿ ಹಕ್ಕಿರುತ್ತದೆ.
ಮಹಿಳೆಯರು ತಾವು ಪಡೆದ ಆಸ್ತಿಯನ್ನು ವಿಲ್ ಮೂಲಕ ಅಥವಾ ಉಡುಗೊರೆಯ ಮೂಲಕ ಯಾರಿಗಾದರೂ ವಿಲೇವಾರಿ ಮಾಡುವ ಹಕ್ಕನ್ನು ಹೊಂದಿರುತ್ತಾರೆ.
ಅಂತೆಯೇ ಗಂಡನಿಂದಲೂ ನಿವಾಸವನ್ನು ಒದಗಿಸುವ ಹಾಗೂ ನಿರ್ವಹಣೆಯನ್ನು ಹೊಂದುವ ಹಕ್ಕನ್ನು ಪಡೆದುಕೊಂಡಿರುತ್ತಾಳೆ. ಅವಿಭಕ್ತ ಕುಟುಂಬದಲ್ಲಿ ಇರುವಾಗ ವಿಭಜನೆಯನ್ನು ಮಾಡಿದರೆ ಗಂಡ ಮತ್ತು ಮಕ್ಕಳಷ್ಟೇ ಸಮಾನ ಹಕ್ಕನ್ನು ಹೊಂದಿರುತ್ತಾಳೆ. ಅದೇ ರೀತಿ, ಗಂಡನ ಮರಣದ ನಂತರ ಅವಳ ಮಕ್ಕಳು ಮತ್ತು ಗಂಡನ ತಾಯಿಯ ಆಸ್ತಿಯಲ್ಲೂ ಸಮಾನವಾದ ಪಾಲನ್ನು ಪಡೆದುಕೊಳ್ಳಲು ಅರ್ಹಳಾಗಿರುತ್ತಾಳೆ
ತಾಯಿ ಆಸ್ತಿ ಹಕ್ಕು: ಅನುವಂಶಿಕ ಕಾನೂನಿನ ಪ್ರಕಾರ ತಾಯಿ ಉತ್ತರಾಧಿಕಾರಿ ಆಗಿರುವುದರಿಂದ ಮಕ್ಕಳಿಗೆ ನಿರ್ವಣೆ ಒದಗಿಸುವ ಹಕ್ಕನ್ನು ಹೊಂದಿರುತ್ತಾಳೆ. ಅವಳು ವಿಲ್ ಮಾಡದೆ ಸತ್ತರೆ ಆಕೆಯ ಆಸ್ತಿಯಲ್ಲಿ ಅವಳ ಎಲ್ಲಾ ಮಕ್ಕಳಿಗೂ ಲಿಂಗ ತಾರತಮ್ಯವಿಲ್ಲದೆ ಸಮಾನ ಪಾಲು ದೊರೆಯುವುದು. ಅವಳು ತನ್ನ ಇಷ್ಟದಂತೆ ಜಮೀನು ಅಥವಾ ಆಸ್ತಿಯನ್ನು ತನಗೆ ಇಷ್ಟವಾಗುವ ಮಕ್ಕಳ ಹೆಸರಿಗೂ ವಿಲ್ ಬರೆಯುವ ಸಂಪೂರ್ಣ ಹಕ್ಕಿದೆ. ಅವಿಭಕ್ತ ಕುಟುಂಬದಲ್ಲಿ ಇರುವಾಗ ವಿಧವಾ ತಾಯಿ ತನ್ನ ಮಗನಂತೆ ಸಮನಾದ ಪಾಲನ್ನು ಪಡೆದುಕೊಳ್ಳುವ ಹಕ್ಕನ್ನು ಸಹ ಹೊಂದಿರುತ್ತಾಳೆ.
ಮನೆ ಖರೀದಿಸಲು ಮಹಿಳೆಯರಿಗೆ ಇರುವ ಪ್ರಯೋಜನಗಳು: ಒಬ್ಬ ಮಹಿಳೆ ತನ್ನ ಹೆಸರಿನಲ್ಲಿ ಮನೆ ಖರೀದಿಸಲು ಮುಂದಾದರೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್‌ಗಳು ಗೃಹಸಾಲವನ್ನು ನೀಡುತ್ತದೆ. ಮಹಿಳಾ ಸಾಲಗಾರರಿಗೆ ಇದು ಶೇ.0.5ರಷ್ಟು ಕಡಿಮೆಯಾಗುತ್ತದೆ. ಮಹಿಳೆಯರು ತಮ್ಮ ಆಸ್ತಿಯ ನೋಂದಣಿಯ ಸಮಯದಲ್ಲಿ ಸ್ಟ್ಯಾಂಪ್ ಡ್ಯೂಟಿಯಲ್ಲಿ ಶೇ.1-2ರಷ್ಟು ರಿಯಾಯತಿಯನ್ನು ಪಡೆದುಕೊಳ್ಳುವರು. ದೆಹಲಿಯಲ್ಲಿ ಮಹಿಳೆಯರಿಗೆ ಶೇ.2ರಷ್ಟು ರಿಯಾಯತಿಯನ್ನು ನೀಡಲಾಗುತ್ತದೆ. ಗೃಹ ಸಾಲಕ್ಕೆ ಪಾವತಿಸಲಾಗುವ 2ಲಕ್ಷ ಬಡ್ಡಿಗೆ ತೆರಿಗೆ ಕಡಿತವನ್ನು ಪಡೆಯಲು ಅರ್ಹರಾಗಿರುತ್ತಾರೆ.