ಬೆಂಗಳೂರು: ಸಾರಿಗೆ ಇಲಾಖೆ ವತಿಯಿಂದ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯ ಯೋಜನೆಯಡಿ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ ಹಾಗೂ ಎಮರ್ಜೆನ್ಸಿ ಬಟನ್ ಯೋಜನೆಯನ್ನು ಸುಧಾರಣೆಗೆ ಒಳಪಡಿಸಿ ಜಾರಿಗೊಳಿಸಲಾಗುತ್ತಿದೆ.
ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಸಾರ್ವಜನಿಕ ಸೇವಾ ವಾಹನಗಳಿಗೆ ಅಳವಡಿಸಿರುವ ಎಮರ್ಜೆನ್ಸಿ ಬಟನ್ ಗಳನ್ನು ಒತ್ತಿದಾಗಲೂ ಸಾರಿಗೆ ಇಲಾಖೆ ಸಂಪರ್ಕ ಕೇಂದ್ರದ ‘ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್’ ಗೆ ಯಾವುದೇ ಸಂದೇಶ ರವಾನೆವಾಗದಿರುವ ಕಾರಣ ಇದೀಗ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ ಹಾಗೂ ಎಮರ್ಜೆನ್ಸಿ ಬಟನ್ ವ್ಯವಸ್ಥೆ ಉತ್ತಮಪಡಿಸಲು ಯೋಜನೆ ಜಾರಿ ಮಾಡಲಾಗುತ್ತಿದೆ.
ವಾಹನಗಳ ಚಲನವಲನಗಳನ್ನು ನಿಗಾ ವಹಿಸುವ ಸಲುವಾಗಿ ಮತ್ತು ತುರ್ತು ಸನ್ನಿವೇಶಗಳಲ್ಲಿ ಸಂದೇಶ ರವಾನೆಯ ಉದ್ದೇಶಕ್ಕಾಗಿ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್’ ಅನ್ನು ಸಾರಿಗೆ ಆಯುಕ್ತರ ಕಛೇರಿಯಲ್ಲಿ ಈಗಾಗಲೇ ಸ್ಥಾಪಿಸಲಾಗಿದ್ದು, 24×7 ನಿರಂತರವಾಗಿ ಮತ್ತು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಲವು ವಾಹನಗಳಲ್ಲಿ ಸಾಧನಗಳ ವೈರ್ ತುಂಡಾಗಿರುವುದು ಮತ್ತು ಅಸಮರ್ಪಕ ಜೋಡಣೆ ಹಾಗೂ ಮೇನ್ ಪವರ್ ಸ್ವಿಚ್ ಆನ್ ಆಗದೇ ಇರುವಂತಹ ಸಂದರ್ಭದಲ್ಲಿ ಹಾಗೂ ಇತರ ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಕೂಡ ಈಗ ವಾಹನ ಮಾಲೀಕರು surakshamitr-ka@cdac.in ಹಾಗೂ ಮೊಬೈಲ್ ಸಂಖ್ಯೆ 9059955319 ಅನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಬೆಂಗಳೂರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ತಿಳಿಸಿದ್ದಾರೆ.