News

ಜನಸಾಮಾನ್ಯರಿಗೆ ಹೊರೆಯಾಗದಂತೆ ನೀರಿನ ದರ ಏರಿಕೆ: ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್

Share It

ಬೆಂಗಳೂರು: ಹನ್ನೊಂದು ವರ್ಷಗಳ ನಂತರ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗದಂತೆ, ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುವುದನ್ನು ಮನಗಾಣಿಸುವ ಅಂಶಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನೀರಿನ ದರವನ್ನು ಏರಿಕೆ ಮಾಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಏ.10ರಂದು ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ಬುಧವಾರ ಬೆಂಗಳೂರು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಳೆದ 11 ವರ್ಷಗಳಲ್ಲಿ ಬೆಂಗಳೂರು ನಗರ ಕೇವಲ ವ್ಯಾಪ್ತಿಯಷ್ಟೇ ಅಲ್ಲ ಜನಸಂಖ್ಯೆಯಲ್ಲೂ ಅಗಾಧ ಬೆಳವಣಿಗೆಯನ್ನು ಕಂಡಿದೆ. ಸರಕಾರದಿಂದ ಹಣಕಾಸಿನ ಸಹಾಯವಿಲ್ಲದೇ ಸ್ವಾಯತ್ತ ಸಂಸ್ಥೆಯಾಗಿರುವ ಮಂಡಳಿಗೆ ಕುಡಿಯುವ ನೀರಿಗೆ ವಿಧಿಸುವ ಶುಲ್ಕವೇ ಪ್ರಮುಖ ಆದಾಯವಾಗಿದೆ. ಕಳೆದ 10 ವರ್ಷಗಳಲ್ಲಿ ವಿದ್ಯುತ್ ವೆಚ್ಚವು ಶೇಕಡಾ 107% ರಷ್ಟು ಹೆಚ್ಚಾಗಿದೆ. ಹಾಗೆಯೇ ನಿರ್ವಹಣಾ ವೆಚ್ಚದಲ್ಲಿ ಶೇಡಕಾ 122.5 ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.

ಪ್ರಸ್ತುತ ಬೆಂಗಳೂರು ಜಲಮಂಡಳಿಯ ಮಾಸಿಕ ವೆಚ್ಚ 200 ಕೋಟಿ ರೂಪಾಯಿಗಳಾಗಿದೆ. ಆದರೆ, ಪ್ರತಿ ತಿಂಗಳು ಸಂಗ್ರಹಣೆ ಆಗುತ್ತಿರುವುದು ಕೇವಲ 120 ಕೋಟಿ ರೂಪಾಯಿಗಳು ಆಗಿದೆ. ಪ್ರತಿ ತಿಂಗಳು ಸುಮಾರು 80 ಕೋಟಿ ರೂಪಾಯಿಗಳ ಆರ್ಥಿಕ ಕೊರತೆಯನ್ನು ಬೆಂಗಳೂರು ಜಲಮಂಡಳಿ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನೀರಿನ ದರವನ್ನು ಏರಿಸಲು ಉದ್ದೇಶಿಸಲಾಗಿದ್ದು , ಏ.10ರಂದು ಅಧಿಕೃತ ಘೋಷಣೆ ಹೊರಡಿಸಲಾಗುವುದು. ಮೇ ತಿಂಗಳ ಬಿಲ್ ನಲ್ಲಿ ಈ ದರ ಏರಿಕೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ತನ್ನ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಜನಸಾಮಾನ್ಯರಿಗೆ ಹೊರೆಯಾಗದಂತೆ ನಿಭಾಯಿಸಲು ನೀರಿನ ದರವನ್ನು ಏರಿಕೆ ಮಾಡಲಾಗಿದೆ. ಕಡಿಮೆ ನೀರು ಬಳಕೆಯನ್ನು ಉತ್ತೇಜಿಸುವುದು ಹಾಗೆಯೇ ನೀರಿನ ಮರುಬಳಕೆಯನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಯಾರಿಗೂ ಹೊರೆಯಾಗದಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಒಮ್ಮೆಲೆ ದರ ಹೆಚ್ಚಳದ ಮೂಲಕ ಜನರಿಗೆ ಹೊರೆಯಾಗುವದನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ಪ್ರತಿ ವರ್ಷ ಏಪ್ರಿಲ್ ತಿಂಗಳ ಒಂದರಂದು ನೀರಿನ ದರವನ್ನು ಶೇಕಡಾ 3 ರಷ್ಟು ಹೆಚ್ಚು ಮಾಡಲು ತೀರ್ಮಾನಿಸಲಾಗಿದೆ. ನಷ್ಟದತ್ತ ಸಾಗುತ್ತಿದ್ದ ಮಂಡಳಿಯ ದಿನ ನಿತ್ಯದ ಖರ್ಚುವೆಚ್ಚಗಳನ್ನು ಸರಿದೂಗಿಸುವ ಜೊತೆಯಲ್ಲಿಯೇ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಮಧ್ಯಮ, ಬಡ ವರ್ಗದ ಜನರಿಗೆ ಹೆಚ್ಚಿನ ಹೊರೆಯಾಗದಂತೆ ಏರಿಕೆ ಮಾಡಲು ಉದ್ದೇಶಿಸಲಾಗಿದ್ದು, ಶುದ್ದ ನೀರಿನ ಅಸಮರ್ಪಕ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲೂ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.


Share It

You cannot copy content of this page