Education News

10ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ನಡೆಸಲಾಗುತ್ತಿದೆ ಪೂರ್ವ ಸಿದ್ದತಾ ತರಗತಿಗಳು

Share It

ಬೆಂಗಳೂರು: 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 9ನೇ ತರಗತಿಯಿಂದ ಉತ್ತಿರ್ಣರಾಗಿ 10ನೇ ತರಗತಿಗೆ ದಾಖಲಾಗುತ್ತಿರುವ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಹಾಗೂ ಸಂಕಲ್ಪ್ ಲರ್ನಿಂಗ್ ಸಂಸ್ಥೆಯ ಸಹಯೋಗದಲ್ಲಿ ಪೂರ್ವ ಸಿದ್ದತಾ ತರಗತಿಗಳನ್ನು ನಡೆಸಲಾಗುತ್ತಿದೆ.

ಏಪ್ರಿಲ್ 11 ರಿಂದ ಮೇ 2025ರ ಅಂತ್ಯದವರೆಗೆ ಬೇಸಿಗೆ ರಜೆಯಲ್ಲಿ ಎಸ್.ಎಸ್.ಎಲ್.ಸಿ “ತಯಾರಿ” ಪೂರ್ವ ಸಿದ್ದತೆ ಶೀರ್ಷಿಕೆಯಡಿ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳಿಗೆ ಉಚಿತ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಇದರೊಂದಿಗೆ ಸಂಕಲ್ಪ್ ಲರ್ನಿಂಗ್ ಸಂಸ್ಥೆಯವರ ಯೂಟೂಬ್ ಲೈವ್ www.youtube.com@sankalplearningsolutions ಮೂಲಕ ಭಾನುವಾರವೂ ಸೇರಿದಂತೆ ಪ್ರತಿ ದಿನ ಸಂಜೆ 6.30 ರಿಂದ 8.30ರ ವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ನೇರ ಪ್ರಸಾರದ ತರಗತಿಗಳು ಸಹ ನಡೆಯಲಿದೆ.

ತರಗತಿಗಳಿಗೆ ದಕ್ಷಿಣ ಜಿಲ್ಲೆಯ 89 ಸರ್ಕಾರಿ ಪ್ರೌಢಶಾಲೆಗಳ 7998 ಹಾಗೂ 134 ಅನುದಾನಿತ ಪ್ರೌಢಶಾಲೆಗಳ 9,123 ಸೇರಿದಂತೆ ಒಟ್ಟು 17,121 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಇನ್ನು ಬೆಂಗಳೂರು ಉತ್ತರ ಜಿಲ್ಲೆಯ 59 ಸರ್ಕಾರಿ ಪ್ರೌಢಶಾಲೆಗಳ 5,839 ಹಾಗೂ 124 ಅನುದಾನಿತ ಪ್ರೌಢಶಾಲೆಗಳ 6,706 ಸೇರಿ ಒಟ್ಟು 12,545 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಕಾರ್ಯಕ್ರಮದ ಪ್ರಯೋಜನವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ತರಗತಿಗಳಿಗೆ ವಿದ್ಯಾರ್ಥಿಗಳು ನಿರಂತರವಾಗಿ ಹಾಜರಾಗುತ್ತಿರುವ ಬಗ್ಗೆ ಅನುಪಾಲನೆ ಹಾಗೂ ಸಮನ್ವಯ ಮಾಡಲು ಸಂಬಂಧಪಟ್ಟ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಬಿ.ಆರ್.ಪಿ ಮತ್ತು ಸಿ.ಆರ್.ಪಿ ಅಗತ್ಯ ಕ್ರಮವಹಿಸಲಿದ್ದಾರೆ. ಪೋಷಕರು ವಿದ್ಯಾರ್ಥಿಗಳ ಮನವೊಲಿಸಿ ತರಗತಿಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.


Share It

You cannot copy content of this page