News

“ನ್ಯಾಯಾಂಗದ ಮೇಲೆ ಕೇಂದ್ರ ಸರ್ಕಾರದ ದಾಳಿ ಸಲ್ಲದು”: ಎ.ಪಿ ರಂಗನಾಥ್

Share It

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಪದೇ ಪದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಕುರಿತಂತೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಎ.ಪಿ ರಂಗನಾಥ್, “ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕಾನೂನು ಮಂತ್ರಿ ಮತ್ತು ಉಪ ರಾಷ್ಟ್ರಪತಿಗಳು ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ಪ್ರತಿ ದಿನವೂ ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕರ ದೃಷ್ಟಿಯಲ್ಲಿ ನ್ಯಾಯಾಂಗದ ಘನತೆಯನ್ನು ಕುಗ್ಗಿಸಲು ಸರ್ವ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ”.

“ಈ ರೀತಿಯ ಚಟುವಟಿಕೆಗಳು ರಾಷ್ಟ್ರದಲ್ಲಿ ಸರ್ವಾಧಿಕಾರಿ ನಾಯಕತ್ವಕ್ಕೆ ಎಡೆ ಮಾಡಿಕೊಡುತ್ತದೆ. ಭಾರತದ ಸಂವಿಧಾನವು ಸ್ವಾಯತ್ತ ನ್ಯಾಯಾಂಗ ವ್ಯವಸ್ಥೆಯ ಪರವಾಗಿದೆ. ನ್ಯಾಯಾಂಗದ ದೈನಂದಿನ ವ್ಯವಹಾರ, ನ್ಯಾಯಮೂರ್ತಿಗಳ ನೇಮಕ, ಪದೋನ್ನತಿ, ವರ್ಗಾವಣೆ ಮುಂತಾದ ವಿಚಾರಗಳ ಕುರಿತು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಸಮಿತಿ ‘ಕೊಲಿಜಿಯಂ ‘ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.”

“ಸದರಿ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಅನವಶ್ಯಕ ಮೂಗು ತೂರಿಸಲು ಅವಕಾಶವಿಲ್ಲ. ಕೊಲಿಜಿಯಂ ಆಯ್ಕೆ ಮಾಡಿದ ಹೆಸರುಗಳನ್ನು ಅಂಗೀಕರಿಸುವುದಷ್ಟೆ ಕೇಂದ್ರ ಸರ್ಕಾರದ ಕೆಲಸ. ಇದರಿಂದ ತಮ್ಮಿಷ್ಟದ ತಮ್ಮ ಸಿದ್ಧಾಂತಗಳನ್ನು ಬೆಂಬಲಿಸುವ 100% ವ್ಯಕ್ತಿಗಳನ್ನು ಹೈಕೋರ್ಟ್ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಸಾಧ್ಯವಿಲ್ಲದಂತಾಗಿರುವುದು ಕೇಂದ್ರ ಸರ್ಕಾರದ ಅಸಹನೆಗೆ ಕಾರಣವಾಗಿದೆ” ಎಂದು ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಸಿಬಿಐ, ಇ.ಡಿ, ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆ, ರಿಸರ್ವ್ ಬ್ಯಾಂಕ್ ಮುಂತಾದ ಇಲಾಖೆಗಳ ಮುಖ್ಯಸ್ಥರ ಹುದ್ದೆಗಳ ನೇಮಕಾತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ತನ್ನಿಷ್ಟದ ವ್ಯಕ್ತಿಗಳನ್ನು ನೇಮಿಸುವುದು, ಅದರಲ್ಲಿ ಹಲವರನ್ನು ನಿವೃತ್ತಿಯ ನಂತರ ಮುಂದುವರೆಸುವುದು ಮುಂತಾದ ಅಪ್ರಜಾಪ್ರಭುತ್ವಕ ಮತ್ತು ಮತ್ತು ಅಸಂವಿಧಾನಿಕ ನಡೆಗಳನ್ನು ನ್ಯಾಯಾಂಗವು ವಿಚಾರಣೆ ನಡೆಸುತ್ತಿರುವುದು, ಜನವಿರೋಧಿ ಕಾಯ್ದೆಗಳ ಸಂವಿಧಾನಾತ್ಮಕತೆಯ ಬಗ್ಗೆ ವಿಶೇಷ ಸಂವಿಧಾನ ಪೀಠಗಳನ್ನು ರಚಿಸಿ ವಿಚಾರಣೆ ಆರಂಭಿಸಿರುವುದು ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇವುಗಳೆಲ್ಲದರ ಜೊತೆಗೆ ಬೆಂಗಳೂರು ವಕೀಲರ ಸಂಘವು ಕೊಲಿಜಿಯಂ ಶಿಫಾರಸ್ಸುಗಳನ್ನು ಜಾರಿ ಮಾಡದ ಕೇಂದ್ರ ಸರ್ಕಾರದ ವಿರುದ್ಧ ದಾಖಲಿಸಿರುವ contempt ಅರ್ಜಿಯ ವಿಚಾರಣೆಯನ್ನು ಸಹ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವುದು ಕೇಂದ್ರ ಸರ್ಕಾರದ ತಳಮಳಕ್ಕೆ ಕಾರಣವಾಗಿದೆ.”

“ಈ ಹಿಂದೆ ತುರ್ತು ಪರಿಸ್ಥಿತಿ ಘೋಷಣೆಗೆ ಮುನ್ನ ಅಂದಿನ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸೇವಾ ಹಿರಿತನವನ್ನು ಕಡೆಗಣಿಸಿ ತನ್ನ ಇಚ್ಚೆಯ ಕಿರಿಯ ನ್ಯಾಯಮೂರ್ತಿಯವರನ್ನು ನೇಮಿಸಿತು. ಕೇಂದ್ರ ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಸುಪ್ರೀಂಕೋರ್ಟಿನ ಹಲವು ನ್ಯಾಯಮೂರ್ತಿಗಳು ರಾಜೀನಾಮೆ ಸಲ್ಲಿಸಿ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿದರು. ಅಂದಿನ ಸರ್ಕಾರ ಮುಂದಿನ ದಿನಗಳಲ್ಲಿ ತನ್ನ ತಪ್ಪಿಗೆ ಸೂಕ್ತ ಬೆಲೆ ತೆರಬೇಕಾಯಿತು ಎಂಬುದು ಇತಿಹಾಸ”.

“ರಾಜಕೀಯ ಪಕ್ಷಗಳು, ವ್ಯಕ್ತಿಗಳು ಅಧಿಕಾರ ಮಾಡುವಾಗ ಎಲ್ಲಾ ವ್ಯವಸ್ಥೆಗಳು, ಸಂಸ್ಥೆಗಳು ಹಾಗೂ ಎಲ್ಲರೂ ತಮ್ಮ ಅಧೀನರಾಗಿರಬೇಕೆಂದೇ ಬಯಸುತ್ತಾರೆ. ಈ ರೀತಿಯ ಬಯಕೆ, ಪ್ರಜಾತಂತ್ರ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ. ಅದಕ್ಕಾಗಿಯೇ ನಮ್ಮ ಸಂವಿಧಾನ ಕರ್ತೃಗಳು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವಿಷಧೀಕರಿಸಿದ್ದಾರೆ.”

“ಇತ್ತೀಚಿಗೆ ಕೇಂದ್ರ ಸರ್ಕಾರದ ಕಾನೂನು ಮಂತ್ರಿಗಳು ಕೊಲಿಜಿಯಂ ಪದ್ಧತಿಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯೊಬ್ಬರಿಗೆ ಅವಕಾಶ ನೀಡಬೇಕೆಂದು ಪತ್ರದ ಮೂಲಕ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳನ್ನು ಒತ್ತಾಯಿಸಿದ್ದಾರೆ.”

“ಕೇಂದ್ರ ಸರ್ಕಾರದ ಕಾನೂನು ಸಚಿವರ ನಿಲುವು, ನ್ಯಾಯಾಂಗವನ್ನು ಕೇಂದ್ರ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಪಮಾರ್ಗವೆಂದೇ ಬಹುತೇಕ ಹಿರಿಯ ವಕೀಲರು ಮತ್ತು ದೇಶದ ಖ್ಯಾತ ನ್ಯಾಯಶಾಸ್ತ್ರಜ್ಞರ ನಿಲುವಾಗಿದೆ. ಕೇಂದ್ರ ಸರ್ಕಾರ ನಡೆಸುತ್ತಿರುವ ನ್ಯಾಯಾಂಗದ ಸ್ವಾಯತ್ತತೆ ಮೇಲಿನ ಧಾಳಿಯನ್ನು ಭಾರತೀಯರೆಲ್ಲರೂ ಖಂಡಿಸಬೇಕಿದ್ದು, ತನ್ಮೂಲಕ ಸಂವಿಧಾನವನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ನಿಭಾಯಿಸಬೇಕು.”

“ಭಾರತೀಯ ವಕೀಲರ ಪರಿಷತ್, ಸರ್ವ ರಾಜ್ಯಗಳ ವಕೀಲರ ಪರಿಷತ್ತುಗಳು ಮತ್ತು ವಕೀಲರ ಸಂಘಗಳು, ಸ್ವತಂತ್ರ ನ್ಯಾಯಾಂಗದ ಸ್ವಾಯತ್ತತೆಯ ಮೇಲಿನ ದಾಳಿಯನ್ನು ಖಂಡಿಸಬೇಕು ಹಾಗೂ ಪ್ರತಿಭಟನೆಯನ್ನು ದಾಖಲಿಸಬೇಕಾದದ್ದು ತುರ್ತು ಅಗತ್ಯವಾಗಿದೆ” ಎಂದು ಎ.ಪಿ.ರಂಗನಾಥ ಹೇಳಿದ್ದಾರೆ.


Share It

You cannot copy content of this page